ಬೆಂಗಳೂರು: ‘ರಾಜ್ಯದಲ್ಲಿ ಮುಂದಿನ ವರ್ಷದಿಂದಫೆಬ್ರುವರಿ 28ರ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನುವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದಲೇ ಆಚರಿಸಲಾಗುವುದು’ ಎಂದುವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈಗ ಮಾನವಿಕ ಕಲಿಕೆಯಲ್ಲೂ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. 3ರಿಂದ 12ನೇ ವಯಸ್ಸುಮಕ್ಕಳ ಕಲಿಕೆಯಲ್ಲಿ ನಿರ್ಣಾಯಕ ಹಂತ. ಹಾಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ವೈಜ್ಞಾನಿಕ ಕಲಿಕೆಗೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ‘ಮೊಘಲರು, ಬ್ರಿಟಿಷರ ಆಕ್ರಮಣಗಳಿಂದ ವೈಜ್ಞಾನಿಕ ಪ್ರಯತ್ನಗಳು ನಿಂತಿದ್ದವು. ಆನಂತರ ಬಂದ ಸರ್ಕಾರಗಳಿಂದಲೂ ಭಾರತೀಯ ವಿಜ್ಞಾನಕ್ಕೆ ಅಗತ್ಯ ಸಹಕಾರ ಸಿಗಲಿಲ್ಲ. ಇದರಿಂದಾಗಿ ದೇಶದವಿಜ್ಞಾನ ಬೆಳವಣಿಗೆಯಲ್ಲಿ ಹಿನ್ನಡೆ ಕಂಡಿತು. ಇಂದು ಪ್ರಪಂಚದ ಬಹುತೇಕ ವಿಜ್ಞಾನ ಸಂಸ್ಥೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಭಾರತೀಯರೇ ಇದ್ದಾರೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ,‘ರಾಜ್ಯ ವಿಜ್ಞಾನ ಪರಿಷತ್ತಿನ ನೆರವಿಗೆ ಸರ್ಕಾರ ₹1 ಕೋಟಿಯಷ್ಟು ಅನುದಾನ ನೀಡುತ್ತಿತ್ತು. ಈಗ ₹25 ಲಕ್ಷವೂ ಬರುತ್ತಿಲ್ಲ. ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕಪರಿಷತ್ತನ್ನು ಹಾಗೂ ವಿಜ್ಞಾನವನ್ನು ಉಳಿಸಬೇಕು’ ಎಂದು ಮನವಿ ಮಾಡಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳು ಹಾಗೂ ಸಂಶೋಧನೆಗಳನ್ನು ಪ್ರದರ್ಶಿಸಿದರು. ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ, ವಿಜ್ಞಾನಿ ಅನುರಾಧಾ, ಕೆ.ವಿ.ಮಾಲಿನಿ, ಬಿ.ಎನ್.ಶ್ರೀನಾಥ್, ಶ್ರೀಮತಿ ಹರಿಪ್ರಸಾದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.