ADVERTISEMENT

ಮಕ್ಕಳಿಗೆ ಉರುಳಾಗಲಿದೆ ಅನ್ಯಭಾಷೆ: ಮಧುರಾ ಅಶೋಕ್‌ ಕುಮಾರ್

ಕಸಾಪ ವಿಜಯನಗರ ಘಟಕ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಮಧುರಾ ಅಶೋಕ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:32 IST
Last Updated 21 ನವೆಂಬರ್ 2024, 14:32 IST
ಸಮ್ಮೇಳನದಲ್ಲಿ ‘ವಿಜಯನಗರ ವೈಭವ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಎಂ. ಕೃಷ್ಣಪ್ಪ, ಮಹೇಶ ಜೋಶಿ, ಸೌಮ್ಯನಾಥ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮಿ, ಮಧುರಾ ಅಶೋಕ್‌ ಕುಮಾರ್ ಮತ್ತು ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ ‘ವಿಜಯನಗರ ವೈಭವ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಎಂ. ಕೃಷ್ಣಪ್ಪ, ಮಹೇಶ ಜೋಶಿ, ಸೌಮ್ಯನಾಥ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮಿ, ಮಧುರಾ ಅಶೋಕ್‌ ಕುಮಾರ್ ಮತ್ತು ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಕ್ಕಳ ಗ್ರಹಿಕೆ ಮತ್ತು ಕಲಿಕೆಯಲ್ಲಿ ಚುರುಕುತನ ಕಾಣಲು ಮಾತೃಭಾಷೆ ಸಹಕಾರಿ. ಶೇ 90ರಷ್ಟು ಮಕ್ಕಳಿಗೆ ಅನ್ಯಭಾಷಾ ಮಾಧ್ಯಮ ಉರುಳಾಗಿ ಪರಿಣಮಿಸುತ್ತಿದೆ’ ಎಂದು ಲೇಖಕಿ ಮಧುರಾ ಅಶೋಕ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ವಿಜಯನಗರ ವಿಧಾನಸಭೆ ಕ್ಷೇತ್ರ ಘಟಕ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಂಠಪಾಠದ ಕಲಿಕೆ ಬುದ್ಧಿ ಭಾವವನ್ನು ಅರಳಿಸುವುದಿಲ್ಲ. ವ್ಯಕ್ತಿ ಸೃಜನಶೀಲನಾಗಿ ಬೆಳೆಯಲು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು. ನಾವು ಯಾವ ಭಾಷೆಯಲ್ಲಿ ಯೋಚಿಸಬಲ್ಲೆವೋ ಅದೇ ಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ಬಿರುಕುಗಳಿಲ್ಲದ ಶಿಕ್ಷಣ ಮತ್ತು ಜ್ಞಾನದ ಅನ್ವೇಷಣೆ ಸಾಧ್ಯ. ಗ್ರಾಮೀಣ ಭಾಗದ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ನಗರ ಪ್ರದೇಶದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಧಿಕ ಶುಲ್ಕ ಪಡೆಯಲಾಗುತ್ತಿದ್ದು, ಸರಿಯಾಗಿ ಇಂಗ್ಲಿಷ್‌ ಭಾಷೆ ಬಾರದ ಶಿಕ್ಷಕರಿಂದ ಗುಣಮಟ್ಟದ ಬೋಧನೆ ನಿರೀಕ್ಷಿಸಲು ಸಾಧ್ಯವೆ’ ಎಂದು ಪ್ರಶ್ನಿಸಿದರು. 

ADVERTISEMENT

‘ಆಧುನಿಕ ಶಿಕ್ಷಣದಿಂದ ಮಹಿಳೆಯರ ಬದುಕು ಆಮೂಲಾಗ್ರವಾಗಿ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಅಸ್ತಿತ್ವ ಕಂಡುಕೊಂಡಿದ್ದಾರೆ. ಹೊರ ಪ್ರಪಂಚದ ಹೊರೆ ಹೆಚ್ಚುತ್ತಾ ಹೋದಂತೆ ಹೆಣ್ಣಿಗೆ ಮನೆಯ ಒಳಗಿನ ಜವಾಬ್ದಾರಿ ಕಡಿಮೆಯಾಗಿಲ್ಲ. ಹಲವು ಒತ್ತಡಗಳಿಂದ ನಲುಗಿ, ಖಿನ್ನತೆಗೆ ಒಳಗಾಗುತ್ತಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಸಮಯದ ನಿರ್ವಹಣೆ ಮಾಡಬೇಕು’ ಎಂದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ‘ಕನ್ನಡಿಗರಿಗೆ ತಮ್ಮ ಶಕ್ತಿಯ ಅರಿವಿಲ್ಲ. ಇದರಿಂದಾಗಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದು, ಈಗಲಾದರೂ ಎಚ್ಚರಗೊಳ್ಳದಿದ್ದರೆ ಕನ್ನಡಿಗರ ಸಂಖ್ಯೆ ಇನ್ನಷ್ಟು ಕುಸಿತವಾಗಲಿದೆ’ ಎಂದು ಹೇಳಿದರು. 

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ‘ಹಳೆ ಬೆಂಗಳೂರಿನ ಕನ್ನಡಿಗರು ಹೊರಗಡೆ ತಳ್ಳಲ್ಪಟ್ಟಿದ್ದಾರೆ. ಮನೆಗಳು ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತನೆಯಾಗುತ್ತಿವೆ. ಮಾತೃ, ಮಾತೃಭೂಮಿ, ಮಾತೃಭಾಷೆಯ ಬಗ್ಗೆ ಅಸಡ್ಡೆ ತೋರಿದರೆ, ನಮ್ಮ ಜಾಗದಲ್ಲಿಯೇ ನಿರಾಶ್ರಿತರಾಗಿ ಬದುಕಬೇಕಾಗುತ್ತದೆ. ಕನ್ನಡಿಗರು ಕಟ್ಟಿದ ನಾಡು ಬೆಂಗಾಡು ಆಗಬಾರದು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ‘ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ಸರ್ಕಾರದ ಜತೆಗೆ ಸಾರ್ವಜನಿಕರಿಗೂ ಇದೆ’ ಎಂದು ಹೇಳಿದರು. 

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿಜಯನಗರ ಶಾಖೆಯ ಸೌಮ್ಯನಾಥ ಸ್ವಾಮೀಜಿ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ, ಕಸಾಪ ವಿಜಯನಗರ ವಿಧಾನಸಭೆ ಕ್ಷೇತ್ರ ಘಟಕದ ಅಧ್ಯಕ್ಷ ಎಸ್.ಬಿ. ಉಮೇಶ್ ಚಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.