ADVERTISEMENT

ಸೇಲಂನಲ್ಲಿ ಸಿಕ್ಕಿಬಿದ್ದ ವಿಜಿ ಹಂತಕರು

ಐದು ವರ್ಷದ ದ್ವೇಷಕ್ಕೆ ಪ್ರತೀಕಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:26 IST
Last Updated 6 ಡಿಸೆಂಬರ್ 2018, 19:26 IST

ಬೆಂಗಳೂರು: ಲಕ್ಕಸಂದ್ರ 16ನೇ ಅಡ್ಡರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ರೌಡಿ ವಿಜಯ್ ಅಲಿಯಾಸ್ ವಿಜಿ ಹತ್ಯೆ ಪ್ರಕರಣದ ಸಂಬಂಧ ಸಿಸಿಬಿ ಹಾಗೂ ಆಡುಗೋಡಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.

ರೌಡಿ ಸೈಲೆಂಟ್ ಸುನೀಲನ ಸಹಚರ ವಿಜಿ, ಕೇಬಲ್ ದಂಧೆ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ 2013ರಲ್ಲಿ ರೌಡಿ ಮಹೇಶ್ ಹಾಗೂ ಆತನ ಸ್ನೇಹಿತ ಏಸು ಎಂಬಾತನನ್ನು ಕೊಲೆ ಮಾಡಿದ್ದ. ಆ ಎರಡು ಹತ್ಯೆಗಳಿಗೆ ಪ್ರತೀಕಾರವಾಗಿ ಮಹೇಶ್‌ನ ಸಂಬಂಧಿಯೇ ಸಂಚು ರೂಪಿಸಿ ಈಗ ವಿಜಿಯನ್ನು ಮುಗಿಸಿದ್ದಾನೆ.

ಲಕ್ಕಸಂದ್ರ ನಿವಾಸಿಯಾದ ವಿಜಿ, ಮಂಗಳವಾರ ರಾತ್ರಿ ಇಬ್ಬರು ಸ್ನೇಹಿತರೊಂದಿಗೆ ತನ್ನ ಕಚೇರಿಯಲ್ಲಿ ಕುಳಿತಿದ್ದ. ಈ ವೇಳೆ ಎಂಟು ಮಂದಿಯ ಗ್ಯಾಂಗ್ ಕಚೇರಿಗೇ ನುಗ್ಗಿ ದಾಳಿ ನಡೆಸಿತ್ತು. ಸ್ನೇಹಿತರು ಜೀವಭಯದಿಂದ ಓಡಿ ಹೋದರೆ, ಪರಾರಿಯಾಗಲು ಯತ್ನಿಸಿದ ವಿಜಿಯನ್ನು ಹಿಡಿದು ಕಚೇರಿಯಲ್ಲೇ ಕೊಚ್ಚಿ ಹಾಕಿದ್ದರು.

ADVERTISEMENT

ಕೃತ್ಯದ ನಂತರ ಸೇಲಂನಲ್ಲಿ ತಲೆಮರೆಸಿಕೊಂಡಿದ್ದ ಜಗಜೀವನ್‌ರಾಮಗರದ ಶಫೀವುಲ್ಲಾ, ಅಪ್ಪಿ ಅಲಿಯಾಸ್ ರಾಜೇಶ, ಶಿವು, ಸುರೇಶ್ ಹಾಗೂ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ಚೀಫ್ ಕಟ್ಟಿಕೊಂಡಿದ್ದರು: ರೌಡಿ ಡೈರಿ ಮಹೇಶ್‌ನ ಸಂಬಂಧಿಯಾದ ಆರೋಪಿ ಸಾಯಿ, ವಿಜಿಯನ್ನು ಮುಗಿಸಲು ಜೆ.ಜೆ. ನಗರದ ಶಫೀವುಲ್ಲಾನ ನೆರವಿನಿಂದ ಗ್ಯಾಂಗ್ ಕಟ್ಟಿದ್ದ. ಆರೋಪಿಗಳು 15 ದಿನಗಳಿಂದಲೂ ವಿಜಿಯ ಚಲನವಲನಗಳನ್ನು ಗಮನಿಸುತ್ತಲೇ ಬಂದಿದ್ದರು.ಮಂಗಳವಾರ ರಾತ್ರಿ ಕೆಲಸದ ನಿಮಿತ್ತ ಜೆ.ಜೆ. ನಗರಕ್ಕೆ ಹೋಗಿದ್ದ ಆತ, ಅಲ್ಲಿಂದ ರಾತ್ರಿ 8 ಗಂಟೆ ಸುಮಾರಿಗೆ ಲಕ್ಕಸಂದ್ರಕ್ಕೆ ‌ವಾಪಸಾಗಿದ್ದ. ಹಂತಕರು ಅಲ್ಲಿಂದಲೇ ಆತನನ್ನು ಹಿಂಬಾಲಿಸಿಕೊಂಡು ಕಚೇರಿವರೆಗೆ ಬಂದಿದ್ದರು.

ಶಫೀವುಲ್ಲಾ, ಸಾಯಿ ಹಾಗೂ ಅಪ್ಪಿ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಮೊದಲು ಒಳ ನುಗ್ಗಿದ್ದರು. ಅವರು ವಿಜಿ ಮುಖಕ್ಕೆ ಖಾರದ ‍ಪುಡಿ ಎರಚುತ್ತಿದ್ದಂತೆಯೇ ಸಹಚರರು ಸಹ ಒಳನುಗ್ಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

‘ವಿಜಿ ಯಾರ‍್ಯಾರ ಜತೆ ಗಲಾಟೆ ಮಾಡಿಕೊಂಡಿದ್ದನೋ, ಅವರೆಲ್ಲರ ಮೊಬೈಲ್ ಸಂಖ್ಯೆಗಳನ್ನು ಪಡೆದು ‘ಟವರ್‌ ಡಂಪ್’ ತನಿಖೆ ನಡೆಸಿದೆವು. ಆಗ ಮಂಗಳವಾರ ರಾತ್ರಿ ವಿಜಿ ಸಾಗಿದ್ದ ದಾರಿಯಲ್ಲೇ ಸಾಯಿ ಕೂಡ ಹೋಗಿರುವುದು ಗೊತ್ತಾಯಿತು. ನಂತರ ಸಿಡಿಆರ್ (ಮೊಬೈಲ್ ಕರೆ ವಿವರ) ಆಧರಿಸಿ ಸೇಲಂನಲ್ಲಿ ಪತ್ತೆ ಮಾಡಿದೆವು’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.