ಬೆಂಗಳೂರು: ಹೃದಯಹೀನ ಸರ್ಕಾರದ ನೀತಿ ಮತ್ತು ಕ್ರಾಂತಿಯ ಅಪ್ರಾಯೋಗಿಕ ಹಾದಿಯಿಂದಾಗಿ ಮಲೆನಾಡಿನ ಆದಿವಾಸಿ ಹೋರಾಟಗಾರ ವಿಕ್ರಂ ಗೌಡನ ಕೊಲೆಯಾಗಿದೆ. ಸರ್ಕಾರ ಈ ಕಳಂಕದಿಂದ ಹೊರಬರಬೇಕಿದ್ದರೆ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿಯೊಬ್ಬರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಲು ಆದೇಶ ನೀಡಬೇಕು ಎಂದು ಮಾಜಿ ನಕ್ಸಲರೂ ಆಗಿರುವ ಸಾಮಾಜಿಕ ಕಾರ್ಯಕರ್ತರಾದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ‘10 ವರ್ಷದಿಂದ ಕರ್ನಾಟಕ ಶಾಂತವಾಗಿತ್ತು. ಈಗ ವಿಕ್ರಂ ಗೌಡನನ್ನು ಹತ್ಯೆ ಮಾಡುವ ಮೂಲಕ ಹೊಸ ವಿದ್ಯಮಾನ ಸೃಷ್ಟಿಸಲಾಗಿದೆ. ಪೊಲೀಸರ ಮೇಲೆ ದಾಳಿ ಮಾಡಿದ್ದನೆ? ಯಾರನ್ನಾದರೂ ಕೊಂದಿದ್ದನೆ? ಕನಿಷ್ಠ ಬೆದರಿಸಿದ್ದನೆ? ಏನನ್ನಾದರೂ ಸುಟ್ಟು ಹಾಕಿದ್ದನೆ? ಕರಪತ್ರ ಹಂಚಿದ್ದನೆ? ಯಾವುದೂ ಇಲ್ಲದೇ ಯಾಕೆ ಕೊಂದು ಹಾಕಿದಿರಿ ಎಂಬ ಸತ್ಯವನ್ನು ಜನರ ಮುಂದೆ ಇಡಬೇಕು’ ಎಂದು ಒತ್ತಾಯಿಸಿದರು.
‘ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿ ಎಂದು ಸರ್ಕಾರ ಕರೆಕೊಟ್ಟಿದೆ. ಆದರೆ, ಈ ಮಾತಿನಲ್ಲಿ ವಿಶ್ವಾಸ ಇಡುವಂತೆ ಸರ್ಕಾರ ನಡೆದುಕೊಂಡಿಲ್ಲ. 2014–18ರ ನಡುವೆ ಮುಖ್ಯವಾಹಿನಿಗೆ ಬಂದವರಲ್ಲಿ ಹಲವರು ನರಕಯಾತನೆ ಅನುಭವಿಸುತ್ತಿದ್ದಾರೆ. ಜಾಮೀನು ಪಡೆದು ಹೊರಬಂದವರನ್ನು ಆಗಿನ ಬಿಜೆಪಿ ಸರ್ಕಾರ ಮತ್ತೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದೆ. ಆದಿವಾಸಿ ಯುವತಿ ಕನ್ಯಾಕುಮಾರಿ 8 ವರ್ಷದಿಂದ ಜೈಲಲ್ಲಿದ್ದಾರೆ. ಅವರ ಮಗು ಆರು ವರ್ಷ ಜೈಲಲ್ಲಿದ್ದು, ಹೋರಾಟದ ನಂತರ ಮಗುವಿಗೆ ಮುಕ್ತಿ ಸಿಕ್ಕಿದೆ. ಪದ್ಮನಾಭ ಪ್ಲಾಸ್ಟಿಕ್ ಶೀಟ್ ಹಾಕಿಕೊಂಡು ಶೆಡ್‌ನಲ್ಲಿ ವಾಸಿಸುತ್ತಿದ್ದು, ಪತ್ನಿ ಮಕ್ಕಳನ್ನು ಸಾಕಲಾಗದೇ ಕಣ್ಣೀರಿಡುತ್ತಿದ್ದಾರೆ. ಹೊರ ಬಂದ ಅನೇಕರ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಿರುವಾಗ ನಕ್ಸಲರು ಮುಖ್ಯವಾಹಿನಿಗೆ ಬರಲು ಮನಸ್ಸು ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.
‘ವಿಕ್ರಂ ಗೌಡ ಕೂಡ ಒಮ್ಮೆಲೇ ನಕ್ಸಲ್ ಚಳವಳಿಗೆ ಸೇರಿದ್ದಲ್ಲ. ತಮ್ಮ ಕುಟುಂಬದ 14 ಗುಂಟೆ ಜಮೀನು ಉಳಿಸಲು ಸತತ ಆರು ವರ್ಷ ಪ್ರಜಾತಾಂತ್ರಿಕವಾಗಿ ಹೋರಾಟ ಮಾಡಿದ್ದರು. ಪೊಲೀಸರು, ಅರಣ್ಯ ಇಲಾಖೆಯವರು ಸತತವಾಗಿ ಕಾಡಿದ್ದಲ್ಲದೇ ವಿಕ್ರಂ ಗೌಡ ಮತ್ತು ಗೆಳೆಯರ ಬದುಕನ್ನು ನರಕ ಮಾಡಿದ್ದರಿಂದ ಅವರು ನಕ್ಸಲ್ ಚಳವಳಿ ಜೊತೆಗೆ ಕೈ ಜೋಡಿಸಿದ್ದರು’ ಎಂದು ಹೇಳಿದರು.
ನಕ್ಸಲ್ ಹೋರಾಟಗಾರರು ವೈಫಲ್ಯಗಳಿಂದ ಪಾಠ ಕಲಿತು ಪ್ರಜಾತಾಂತ್ರಿಕವಾಗಿ ಹೋರಾಟ ಮಾಡಬೇಕು. ಬಂದೂಕು ಕೈಗೆತ್ತಿಕೊಳ್ಳುವುದನ್ನು ಬಿಡಬೇಕು. ಆಳುವವರು ಮೊದಲು ಹಿಂಸೆಯನ್ನು ಕೈಬಿಡಬೇಕು. ಸಮಾಜದ ಜನಪರ ಚಳವಳಿಗಳು, ನಾಗರಿಕರು ಕೂಡ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಬೇಕು. ನಕ್ಸಲರು ಮುಖ್ಯವಾಹಿನಿಗೆ ಬರಲು ಸರಿಯಾದ ನೀತಿ ರೂಪಿಸಲು ಆಗ್ರಹಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಎನ್. ವೆಂಕಟೇಶ್, ಅಖಿಲ ಕರ್ನಾಟಕ ವಿಚಾರವಾದಿಗಳ ವೇದಿಕೆಯ ಸಂಚಾಲಕ ನಾಗೇಶ್ ಅರಳಕುಪ್ಪೆ, ಹೋರಾಟಗಾರ ಬಾಲು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.