ಬೆಂಗಳೂರು: ನಗರದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ 20ಕ್ಕೂ ಹೆಚ್ಚು ಸಂಚಾರ ಪೊಲೀಸರು ವಿಕ್ರಮ್ ಆಸ್ಪತ್ರೆಯಲ್ಲಿ ಬುಧವಾರ, ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ ಸಿಪಿಆರ್ ತರಬೇತಿಯಲ್ಲಿ ಪಾಲ್ಗೊಂಡರು.
ತುರ್ತುಚಿಕಿತ್ಸೆ ವಿಭಾಗದ ಡಾ. ಹರ್ಷಿತಾ ಶ್ರೀಧರ್ ಅವರು ಸಂಚಾರ ಪೊಲೀಸರಿಗೆ ತರಬೇತಿ ನೀಡಿದರು. ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಕುಸಿದು ಬಿದ್ದರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನಗಳನ್ನು ವಿವರಿಸಿದರು. ‘ಮೊದಲು ನಮ್ಮ ಎರಡೂ ಕೈಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ರೋಗಿಯ ಎದೆಭಾಗವನ್ನು ಬಲವಾಗಿ ಒತ್ತಬೇಕು. ತಲೆಯನ್ನು ಸ್ವಲ್ಪ ಹಿಂದಕ್ಕೆ ವಾಲಿಸಿ, ಮೂಗು ಮುಚ್ಚಿ ಬಾಯಿಗೆ ನಮ್ಮ ಬಾಯಿಯಿಂದ ಉಸಿರಾಟ ಕೊಡಬೇಕು. ಇದರಿಂದ ರೋಗಿಯು ಸ್ವಲ್ಪ ಚೇತರಿಸಿಕೊಳ್ಳುತ್ತಾರೆ. ನಂತರ ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಮಾಹಿತಿ ನೀಡಿದರು.
ಬೊಂಬೆಗಳನ್ನು ಬಳಸಿ ಪ್ರಥಮ ಚಿಕಿತ್ಸೆ ಮಾಡುವುದನ್ನು ಸಂಚಾರ ಪೊಲೀಸರು ಕಲಿತುಕೊಂಡರು. ಈ ವೇಳೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಟಿ. ಸುನಿಲ್ ಕುಮಾರ್, ‘ಸಂಚಾರ ಪೊಲೀಸರು ಪ್ರತಿ ದಿನ ವಾಹನ ದಟ್ಟಣೆಯಲ್ಲಿ ಕೆಲಸ ಮಾಡುತ್ತಾರೆ. ಒತ್ತಡದಿಂದಾಗಿ ಅವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಹೆಚ್ಚು. ಇಂತಹ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ಉಪಚರಿಸುವುದನ್ನು ಕಲಿತುಕೊಂಡಿರಬೇಕು. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದಲೂ ಇದು ಒಳ್ಳೆಯದು. ನೀವು ಕಲಿತು ನಾಲ್ಕು ಜನರಿಗೆ ಹೇಳಿಕೊಡಿ. ಮಾದರಿಯಾಗಿ’ ಎಂದು ಹೇಳಿದರು.
ಹೃದಯ ರೋಗ ತಜ್ಞ ಡಾ.ಪಿ.ರಂಗನಾಥ್ ನಾಯಕ್, ‘ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಒತ್ತಡದ ಜೀವನಶೈಲಿಯಿಂದ ಬರುತ್ತವೆ. ಆದರೆ ಮುನ್ನೆಚ್ಚರಿಕೆ ಕಂಡುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಡ ಕುಟುಂಬದ ರೋಗಿಗಳು ಹಣ ಹೊಂದಿಸುವುದು ಹಾಗೂ ಆಸ್ಪತ್ರೆ ಅಲೆಯುವುದರಲ್ಲೇ ಹೈರಾಣಾಗುತ್ತಾರೆ. ಅದರ ಬದಲು ಧೂಮಪಾನ ಬಿಟ್ಟು, ವ್ಯಾಯಾಮ ಹಾಗೂ ಕಟ್ಟುನಿಟ್ಟಿನ ಜೀವನ ಶೈಲಿ ಅನುಸರಿಸುವುದು ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.