ಬೆಂಗಳೂರು: ಚಂದ್ರನ ನೆಲದ ಮೇಲೆ ‘ವಿಕ್ರಮ್’ ಲ್ಯಾಂಡರ್ ಪತನದ ಕಾರಣಗಳೇನು ಎಂಬುದು ಒಂದು ವಾರ ಅಥವಾ 10 ದಿನಗಳಲ್ಲಿ ಗೊತ್ತಾಗಲಿದೆ.
ಪತನಕ್ಕೆ ಕಾರಣಗಳನ್ನು ಪತ್ತೆ ಮಾಡಲು ತಜ್ಞರ ಸಮಿತಿ ಈಗಾಗಲೇ ರಚನೆಯಾಗಿದೆ. ಅದು ತನ್ನ ಕಾರ್ಯ ಆರಂಭಿಸಿದೆ. ಆದರೆ, ಈವರೆಗೂ ಪತನಕ್ಕೆ ಸಣ್ಣ ಸುಳಿವೂ ಸಿಕ್ಕಿಲ್ಲ. ಆದರೆ, ಕೆಲವು ಮಾಧ್ಯಮಗಳು ‘ಊಹಾಪೋಹ’ ಆಧಾರದ ಮೇಲೆ ಪತನಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಿವೆ. ಆ ಕಾರಣಗಳು ಹುರುಳಿಲ್ಲದ್ದು ಮತ್ತು ತಪ್ಪು ಮಾಹಿತಿ ಎಂದು ಇಸ್ರೊದ ಅತಿ ಹಿರಿಯ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಜ್ಞರ ಸಮಿತಿ ಎಲ್ಲ ದತ್ತಾಂಶಗಳನ್ನು ಕಲೆ ಹಾಕಿ ವಿಶ್ಲೇಷಣೆ ನಡೆಸುತ್ತದೆ. ಬಳಿಕ ಸಿಮ್ಯುಲೇಷನ್ ಮೂಲಕ ಕಾರಣಗಳನ್ನು ಖಾತರಿಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ನಿಖರವಾದ ಕಾರಣ ಪತ್ತೆ ಮಾಡಲು ಆಗದಿದ್ದರೆ, ಪತನದ ಸಾಧ್ಯತೆ 'ಇರುವ ನಾಲ್ಕರಿಂದ ಐದು ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ. ವಿಶ್ವದ ಯಾವುದೇ ಭಾಗದಲ್ಲಾದರೂ ಬಾಹ್ಯಾಕಾಶ ವಿಜ್ಞಾನದಲ್ಲಿ ಇದೇ ಮಾನದಂಡಗಳನ್ನು ಅನುಸರಿಸಿ ವಾಸ್ತವ ಸಂಗತಿ ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತದೆ ಎಂದರು.
ಆಟೋಮ್ಯಾಟಿಕ್ ಲ್ಯಾಂಡಿಂಗ್ ಪ್ರೋಗ್ರಾಂನಲ್ಲಿ ಲೋಪ ಆಗಿದೆ ಎಂಬುದು ಕೂಡ ಒಂದು ತರ್ಕ. ಅದರಲ್ಲಿ ಸತ್ಯ ಇಲ್ಲ. ಬೆಂಗಳೂರಿನಲ್ಲಿ ಇರುವ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಗೊತ್ತಿಲ್ಲದ್ದು, ಬೇರೆ ಊರಿನ ತಜ್ಞರಿಗೆ ಗೊತ್ತಾಗುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.
‘ಬೇಗನೆ ಕಾರಣಗಳನ್ನು ಪತ್ತೆ ಮಾಡಿ ತಿಳಿಸಿ ಎಂದು ಕೇಂದ್ರ ಸರ್ಕಾರ ಸೇರಿದಂತೆ ಯಾರೂ ಇಸ್ರೊಗೆ ಒತ್ತಡ ಹೇರಿಲ್ಲ. ಒಮ್ಮೆ ನಿಖರ ಕಾರಣ ಪತ್ತೆ ಮಾಡಲು ಸಾಧ್ಯವಾಗದೇ ಇದ್ದರೆ, ನಾಲ್ಕೈದು ಸಾಧ್ಯತೆಗಳ ಪಟ್ಟಿಯನ್ನು ನೀಡಲಿದೆ. ಇದು ಸಾರ್ವಜನಿಕ ಆಸಕ್ತಿಯ ವಿಚಾರವಲ್ಲ, ತಾಂತ್ರಿಕ ವಿಷಯ. ಆದರೂ ಸಾರ್ವಜನಿಕ ಗಮನಕ್ಕೆ ಮಾಹಿತಿ ಬಿಡುಗಡೆ ಮಾಡಲೂಬಹುದು’ ಎಂದರು.
**
ಇಸ್ರೊದಲ್ಲಿ ಈವರೆಗೂ ಲ್ಯಾಂಡರ್ ಪತನ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೂ ಲ್ಯಾಂಡರ್ ಪತನಗೊಂಡಿರುವ ಚಿತ್ರವನ್ನೂ ನೋಡಲು ಸಾಧ್ಯವಾಗಿಲ್ಲ
- ಇಸ್ರೊ ಹಿರಿಯ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.