ADVERTISEMENT

ಸರ್ಕಾರದ ಶಿಷ್ಟಾಚಾರ ಉಲ್ಲಂಘನೆ: ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:12 IST
Last Updated 5 ಜುಲೈ 2024, 16:12 IST
ಚನ್ನಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿದರು
ಚನ್ನಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿದರು   

ಚನ್ನಪಟ್ಟಣ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಿಸಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಕಾರ್ಯಕ್ರಮ ನಡೆಸಿದ್ದರೂ ಸಂಸದ ಡಾ.ಮಂಜುನಾಥ್ ಹಾಗೂ ವಿಧಾನ ಪರಿಷತ್‌ ಸದಸ್ಯನಾದ ನನಗೆ ಆಹ್ವಾನ ನೀಡಿಲ್ಲ. ಕೇವಲ ಉಪ ಚುನಾವಣಾ ತಂತ್ರಕ್ಕೆ ಜನರನ್ನು ಸೇರಿಸಿ ಜಾತ್ರೆ ಮಾಡಿದ್ದಾರೆ. ಮುಂಬರುವ ಉಪಚುನಾವಣೆ ಉದ್ದೇಶದಿಂದ ಜನರನ್ನು ಮರಳು ಮಾಡಲು ಈ ಕಾರ್ಯಕ್ರಮ ಮಾಡಿದ್ದಾರೆ’ ಎಂದು ಟೀಕಿಸಿದರು.

ಸರ್ಕಾರದ ಹಣದಲ್ಲಿ ಉಪಚುನಾವಣೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕನಕಪುರದಿಂದ ಗೆದ್ದು ರಾಮನಗರ ಜಿಲ್ಲಾ ಉಸ್ತುವಾರಿ ತೆಗೆದುಕೊಂಡಿಲ್ಲ. ಬೆಂಗಳೂರು ಉಸ್ತುವಾರಿ ತೆಗೆದುಕೊಂಡಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಈಗ ಉಪ ಚುನಾವಣೆ ಸಮಯದಲ್ಲಿ ಮಾತ್ರ ಚನ್ನಪಟ್ಟಣ ನೆನಪಾಗಿದೆ. ಚನ್ನಪಟ್ಟಣ ಜನ ಬುದ್ಧಿವಂತರಿದ್ದಾರೆ. ಇಂತಹ ನಾಟಕಗಳಿಗೆ ಜನ ಸೂಕ್ತ ಉತ್ತರ ಕೊಡುತ್ತಾರೆ ಎಂದರು.

ADVERTISEMENT

ಉಪಚುನಾವಣೆಗೆ ನಾನೇ ಅಭ್ಯರ್ಥಿ: ಯೋಗೇಶ್ವರ್

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ನಾನೇ ಮೈತ್ರಿ ಪಕ್ಷದ ಅಭ್ಯರ್ಥಿ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು. ‘ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಳೆದ ವಾರ ನಾನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಕುಮಾರಸ್ವಾಮಿ ಅವರು ನನ್ನನ್ನೇ ಸ್ಪರ್ಧಿಸುವಂತೆ ತಿಳಿಸಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆಯನ್ನು ಅವರೇ ಕೊಡಬೇಕು. ಪತ್ರಿಕಾಗೋಷ್ಠಿ ಕರೆದು ಹೆಸರು ಘೋಷಣೆ ಮಾಡುವಂತೆ ಅವರಲ್ಲಿ ಮನವಿ ಮಾಡಿದ್ದೇನೆ’ ಎಂದರು.

‘ಈಗಾಗಲೇ ಕಾಂಗ್ರೆಸ್ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಘೋಷಣೆಯಾದರೆ ನಾವು ಸಹ ಸಿದ್ಧತೆ ಮಾಡಿಕೊಳ್ಳಬಹುದು. ಸೋಮವಾರದಿಂದ ತಾಲ್ಲೂಕಿನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸುತ್ತೇನೆ. ನನ್ನ ಹೆಸರು ಅಧಿಕೃತ ಅನುಮೋದನೆಗಾಗಿ ನಾನು ಕಾಯುತ್ತಿದ್ದೇನೆ’ ಎಂದು ತಿಳಿಸಿದರು. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೆ ನಿಮ್ಮ ನಿರ್ಧಾರ ಏನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೋಗೇಶ್ವರ್ ‘ಸದ್ಯ ಆ ವಿಚಾರ ನನ್ನ ಮುಂದೆ ಇಲ್ಲ. ಮೈತ್ರಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.