ADVERTISEMENT

ಬೆಂಗಳೂರು | ಟೆಕಿ ಅಪಹರಣ ಶಂಕೆ: ಪತ್ನಿ ಅಳಲು

₹5 ಲಕ್ಷಕ್ಕೆ ಅಪರಿಚಿತರಿಂದ ಬೇಡಿಕೆ: ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 23:39 IST
Last Updated 12 ಆಗಸ್ಟ್ 2024, 23:39 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವಿಪಿನ್‌ ಗುಪ್ತಾ (37) ಅವರು ಕೆಲವು ದಿನಗಳಿಂದ ನಾಪತ್ತೆ ಆಗಿದ್ದು, ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ಅವರ ಪತ್ನಿ ದೂರು ನೀಡಿದ್ದಾರೆ.

‘ಬೈಕ್ ತೆಗೆದುಕೊಂಡು ಮನೆಯಿಂದ ಹೋದವರು ಎಂಟು ದಿನ ಕಳೆದರೂ ವಾಪಸ್‌ ಬಂದಿಲ್ಲ. ದಯವಿಟ್ಟು ಹುಡುಕಿಕೊಡಿ’ ಎಂದು ಹೇಳಿ ವಿಪಿನ್ ಅವರ ಪತ್ನಿ ಶ್ರೀಪರ್ಣಾ ದತ್‌ ದೂರು ನೀಡಿದ್ದಾರೆ. ಅಲ್ಲದೇ ಅಪಹರಣ ಶಂಕೆ ವ್ಯಕ್ತಪಡಿಸಿದ್ದಾರೆ. ಅಪರಿಚಿತರು ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ತನಿಖೆಗೂ ಆಗ್ರಹಿಸಿದ್ದಾರೆ.   

ADVERTISEMENT

‘ಲಖನೌದ ವಿಪಿನ್‌ ಗುಪ್ತಾ, ಶ್ರೀಪರ್ಣಾ ಹಾಗೂ ಇಬ್ಬರು ಪುತ್ರಿಯರ ಜತೆಗೆ ಟಾಟಾನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿಪಿನ್‌ ಗುಪ್ತಾ ಕಳೆದ ಜೂನ್‌ನಲ್ಲಿ ಉದ್ಯೋಗ ತೊರೆದಿದ್ದರು. ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆ.4ರಂದು ಮಧ್ಯಾಹ್ನ 12.42ಕ್ಕೆ ಮನೆಯಿಂದ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದರು. ಇದಾದ, 25 ನಿಮಿಷಕ್ಕೆ ಖಾತೆಯಿಂದ ₹1.80 ಲಕ್ಷ ಹಣ ಡ್ರಾ ಆಗಿದೆ. ಅದಾದ ಮೇಲೆ ಅವರು ಮನೆಗೆ ಬಂದಿಲ್ಲ. ಮೊಬೈಲ್‌ ಸಹ ಸ್ವಿಚ್ಡ್ ಆಫ್‌ ಆಗಿದೆ’ ಎಂದು ದೂರು ನೀಡಲಾಗಿದೆ.

ವಿಪಿನ್‌ ಗುಪ್ತಾ ಪತ್ತೆಗೆ ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

‘ನನ್ನ ಮೊಬೈಲ್‌ಗೆ ಬ್ಲ್ಯಾಕ್‌ಮೇಲ್‌ ಸಂದೇಶ ಬರುತ್ತಿದೆ. ಅಪರಿಚಿತರು ₹5 ಲಕ್ಷಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡದಿದ್ದಲ್ಲಿ ನಿನ್ನ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ’ ಎಂದು ಶ್ರೀಪರ್ಣಾ ದತ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ.

‘ಟೆಕಿ ವಿಪಿನ್‌ ಗುಪ್ತಾ ಅವರು ಈ ಹಿಂದೆಯೂ ಒಮ್ಮೆ ನಾಪತ್ತೆ ಆಗಿದ್ದರು. ಮೊಬೈಲ್‌ ಸಹ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದರು. ಗೋವಾದಲ್ಲಿ ಅವರನ್ನು ಪತ್ತೆ ಹಚ್ಚಲಾಗಿತ್ತು. ಈಗ, ಮತ್ತೆ ಸಹಕಾರ ನಗರದ ಬ್ಯಾಂಕ್‌ನ ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ನಾಪತ್ತೆ ಆಗಿದ್ದಾರೆ. ತನಿಖೆ ಮುಂದುವರಿದಿದೆ‘ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜಿತ್‌ ತಿಳಿಸಿದ್ದಾರೆ.

ಪೊಲೀಸರ ವಿರುದ್ಧವೂ ಆರೋಪ:

‘ನಾಪತ್ತೆಯಾದ ದಿನವೇ ಠಾಣೆಗೆ ದೂರು ನೀಡಲು ತೆರಳಿದ್ದೆ. ಆದರೆ, ಪೊಲೀಸರ ಸರಿಯಾಗಿ ಸ್ಪಂದಿಸಲಿಲ್ಲ. ಕಾಡಿಬೇಡಿದ ಬಳಿಕ ಆ.6ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಈವರೆಗೂ ಪತಿ ಪತ್ತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರುದಾರ ಮಹಿಳೆ ‘ಎಕ್ಸ್‌’ ಖಾತೆಯಲ್ಲಿ ಪೊಲೀಸರ ವಿರುದ್ಧವೇ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.