ADVERTISEMENT

ವಿದ್ಯಾಪೀಠದಲ್ಲಿ ವಿಶ್ವೇಶ ತೀರ್ಥರ ಬೃಂದಾವನ: ಹೀಗೆ ನಡೆಯುತ್ತೆ ಅಂತಿಮ ವಿಧಿವಿಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2019, 8:40 IST
Last Updated 29 ಡಿಸೆಂಬರ್ 2019, 8:40 IST
ವಿಶ್ವೇಶ ತೀರ್ಥ ಸ್ವಾಮೀಜಿ
ವಿಶ್ವೇಶ ತೀರ್ಥ ಸ್ವಾಮೀಜಿ   

ಬೆಂಗಳೂರು: ಉಡುಪಿಯಲ್ಲಿ ನಿಧನರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನಗಳು ಶ್ರೀನಿವಾಸನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಇಂದು ಸಂಜೆ ಮಾಧ್ವ ಪರಂಪರೆಗೆ ಅನುಗುಣವಾಗಿನಡೆಯಲಿದೆ. ವಿಶ್ವೇಶ ತೀರ್ಥರ ಆಪ್ತ ಶಿಷ್ಯ ಮತ್ತು ವಿದ್ಯಾಪೀಠದ ಪ್ರಾಚಾರ್ಯಕೃಷ್ಣರಾಜ ಕುತ್ಪಾಡಿ ಧಾರ್ಮಿಕ ವಿಧಿಗಳ ಮಾರ್ಗದರ್ಶನ ನೀಡಲಿದ್ದಾರೆ.

ಸೂರ್ಯಸ್ತದೊಳಗೆ ಧಾರ್ಮಿಕ ವಿಧಿಗಳನ್ನು ಆರಂಭಿಸುವ ಆಲೋಚನೆ ಶ್ರೀಮಠಕ್ಕೆ ಇದೆ. ಅಕಸ್ಮಾತ್ ತಡವಾದರೂ ಇಂದೇ ಬೃಂದಾವನ ಪ್ರಕ್ರಿಯೆ ಮುಗಿಸಬೇಕು ಎನ್ನುವ ಸಂಕಲ್ಪವನ್ನು ಮಠದ ಶಿಷ್ಯರು ಮಾಡಿದ್ದಾರೆ.

ವಿದ್ಯಾಪೀಠ ಆವರಣಕ್ಕೆ ಪಾರ್ಥಿವ ಶರೀರ ಪ್ರವೇಶಿಸಿದ ನಂತರ ಗೋಪಿಚಂದನ ಮತ್ತು ಮುದ್ರಾಧಾರಣೆಗಳು ನಡೆಯುತ್ತವೆ. ಹೊಸಬಟ್ಟೆ ಉಡಿಸಿ ಅಲಂಕಾರ ಮಾಡಿದ ನಂತರ ಅವರಿಂದಲೇ ಕೃಷ್ಣ ಮತ್ತು ರಾಯರ (ರಾಘವೇಂದ್ರ ಸ್ವಾಮಿಗಳ) ಸನ್ನಿಧಾನ ಪೂಜೆ ಮಾಡಿಸಲಾಗುತ್ತದೆ.

ADVERTISEMENT

ಶ್ರೀಗಳು ಸದಾ ಪಾಠ ಪ್ರವಚನ ಕೇಳಬೇಕು ಎಂದು ಬಯಸುತ್ತಿದ್ದರು.ಈ ಹಿಂದೆ ಶ್ರೀಗಳು ಬಯಸಿದ್ದಂತೆ ವಿದ್ಯಾಪೀಠ ಆವರಣದ ಹುಲ್ಲುಹಾಸಿನಲ್ಲಿ ಬೃಂದಾವನಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಶ್ರೀಗಳ ದೇಹದ ಎತ್ತರದ ಎರಡು ಪಟ್ಟು ಆಳದ ಗುಂಡಿ ತೋಡಿ, ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ಸ್ವಸ್ತಿಕಾಸನದಲ್ಲಿ ಇರಿಸಿದ ಪಾರ್ಥಿವ ಶರೀರದ ಸುತ್ತಲೂ ವಿವಿಧ ಕ್ಷೇತ್ರಗಳಿಂದ ತಂದ ಮಣ್ಣು,ಕರ್ಪೂರ, ಹತ್ತಿ, ಉಪ್ಪು ಇತ್ಯಾದಿ ಪರಿಕರಗಳನ್ನುತುಂಬಲಾಗುತ್ತದೆ.

ನೆತ್ತಿಯ ಮೇಲಿನ ಭಾಗದಲ್ಲಿ ಒಂದು ತೂತಿರುವ ಪಾತ್ರೆಯಲ್ಲಿ ಸಾಲಿಗ್ರಾಮ ಇತ್ಯಾದಿ ಪೂಜಾ ಪ್ರತೀಕಗಳನ್ನು ಇರಿಸಲಾಗುತ್ತೆ.ಬೃಂದಾವನಕ್ಕೆ ಪೂಜೆ ಮಾಡುವಾಗ ಅದರ ನೀರು ಸಾಲಿಗ್ರಾಮ ಸೋಕಿ, ಆ ಮೂಲಕ ತಲೆಯಿಂದ ದೇಹಕ್ಕೆ ಬೀಳುವಂಥ ವ್ಯವಸ್ಥೆ ಇರುತ್ತೆ. ನಾಳ ಜೋಡಣೆಯ ಮೂಲಕಸಾಲಿಗ್ರಾಮದ ನೀರು ದೇಹ ಸೋಕುವಂತೆ ಮಾಡಲಾಗಿರುತ್ತದೆ.

ನಾಳೆ ಬೆಳಿಗ್ಗೆಯಿಂದಯಥಾಪ್ರಕಾರ ನಿತ್ಯದ ಪೂಜೆಗಳು ಆರಂಭವಾಗುತ್ತವೆ. ಈಗಾಗಲೇ ಗುರುತು ಮಾಡಿರುವ ಜಾಗದಲ್ಲಿ ಪಾರ್ಥಿವ ಶರೀರ ಇರಿಸಿ, ವಿಧಿಗಳನ್ನು ಪೂರ್ಣಗೊಳಿಸಿ ತಾತ್ಕಾಲಿಕ ಬೃಂದಾವನ ಮಾಡಲಾಗುವುದು.ಮುಂದಿನ ದಿನಗಳಲ್ಲಿ ಇದೇ ನಕ್ಷತ್ರದಂದು ಕಲ್ಲಿನ ಕೆತ್ತನೆಯ ಬೃಂದಾವನವನ್ನು ಅಳವಡಿಸಲಾಗುತ್ತದೆ ಎಂದುಕೃಷ್ಣರಾಜ ಕುತ್ಪಾಡಿ ಮಾಹಿತಿ ನೀಡಿದರು.

ವಿದ್ಯಾಪೀಠದ ಆವರಣದಲ್ಲಿ ಬೃಂದಾವನಕ್ಕೆ ಸಿದ್ಧತೆ
ವಿದ್ಯಾಪೀಠದ ಆವರಣದಲ್ಲಿ ಬೃಂದಾವನಕ್ಕೆ ಸಿದ್ಧತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.