ADVERTISEMENT

ಉಪನಗರ ರೈಲು ಯೋಜನೆ: ಬಿಎಸ್ಆರ್‌ಪಿಗೆ ವಿದೇಶಿ ಬ್ಯಾಂಕ್ ಅಧಿಕಾರಿಗಳ ಭೇಟಿ,ಪರಿಶೀಲನೆ

ಇತರ ಉಪ‍ನಗರ ಯೊಜನೆಗಳಿಗೆ ಮಾದರಿ: ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 10:12 IST
Last Updated 21 ಜೂನ್ 2024, 10:12 IST
ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಸಾಲದ ನೆರವು ನೀಡಲು ಒಪ್ಪಂದ ಮಾಡಿಕೊಂಡಿರುವ ಜರ್ಮನಿಯ ಕೆಎಫ್‌ಡಬ್ಲ್ಯು ಅಭಿವೃದ್ಧಿ ಬ್ಯಾಂಕ್‌ ಮತ್ತು ಯುರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಇಬಿ) ಅಧಿಕಾರಿಗಳ ತಂಡದೊಂದಿಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಚರ್ಚಿಸಿದರು
ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಸಾಲದ ನೆರವು ನೀಡಲು ಒಪ್ಪಂದ ಮಾಡಿಕೊಂಡಿರುವ ಜರ್ಮನಿಯ ಕೆಎಫ್‌ಡಬ್ಲ್ಯು ಅಭಿವೃದ್ಧಿ ಬ್ಯಾಂಕ್‌ ಮತ್ತು ಯುರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಇಬಿ) ಅಧಿಕಾರಿಗಳ ತಂಡದೊಂದಿಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಚರ್ಚಿಸಿದರು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಸಾಲದ ನೆರವು ನೀಡಲು ಒಪ್ಪಂದ ಮಾಡಿಕೊಂಡಿರುವ ಜರ್ಮನಿಯ ಕೆಎಫ್‌ಡಬ್ಲ್ಯು ಅಭಿವೃದ್ಧಿ ಬ್ಯಾಂಕ್‌ ಮತ್ತು ಯುರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಇಬಿ) ಅಧಿಕಾರಿಗಳ ತಂಡ ಬಿಎಸ್‌ಆರ್‌ಪಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚೆ ನಡೆಸಿತು.

‘ಬಿಎಸ್‌ಆರ್‌ಪಿ 148 ಕಿ.ಮೀ. ಅನುಮೋದಿತ ಜಾಲವನ್ನು ಹೊಂದಿದೆ. ದೇಶದ ಇತರ ಎಲ್ಲ ಉಪನಗರ ರೈಲು ಯೋಜನೆಗಳಿಗೆ ಮಾದರಿಯಾಗಲಿದೆ’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ADVERTISEMENT

‘ಬಿಎಸ್‌ಆರ್‌ಪಿ ನಗರ ಸಾರಿಗೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ. ಅದು ನಗರದ ಹೊರವಲಯದ ಅಭಿವೃದ್ಧಿಗೂ ದಿಕ್ಸೂಚಿಯಾಗಲಿದೆ’ ಎಂದು ನಿಯೋಗಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ತಿಳಿಸಿದರು.

ಇಇಬಿ ತಂಡದ ಅಧಿಕಾರಿ ಎಂಜಿಲಿಕಿ ಕೊಪ್ಸಚೆಲ್ಲಿ ಮಾತನಾಡಿ, ‘ಇಇಬಿ ಭಾರತದಲ್ಲಿ ನಗರ ಸಾರಿಗೆ ಯೋಜನೆಗೆ ನೆರವು ನೀಡುತ್ತಿರುವ ಐಕಾನಿಕ್‌ ಯೋಜನೆ ಬಿಎಸ್‌ಆರ್‌ಪಿ ಆಗಿದೆ. ಇಲ್ಲಿ ಕೈಗೊಂಡಿರುವ ಜನಸಂಪರ್ಕ ಉಪಕ್ರಮಗಳು ಮತ್ತು ಪಾಲುದಾರರನ್ನು ತೊಡಗಿಸಿಕೊಂಡಿರುವ ಕ್ರಮಗಳು ಉತ್ತಮವಾಗಿವೆ’ ಎಂದು ಶ್ಲಾಘಿಸಿದರು.

ಕೆಎಫ್‌ಡಬ್ಲ್ಯು ಅಭಿವೃದ್ಧಿ ಬ್ಯಾಂಕ್‌ನ ಹವಾಮಾನ ಹಣಕಾಸು ಮತ್ತು ಸಾರಿಗೆ ವಿಭಾಗದ ಹಿರಿಯ ತಾಂತ್ರಿಕ ತಜ್ಞ ಸೆಬಾಸ್ಟಿಯನ್‌ ಎಬರ್ಟ್‌ ಮಾತನಾಡಿ, ‘ಸುಸ್ಥಿರ ನಗರ ಸಾರಿಗೆಗೆ ಬಿಎಸ್ಆರ್‌ಪಿ ಮಾದರಿಯಾಗಿದೆ. ಲಿಂಗಸೂಕ್ಷ್ಮ ಮತ್ತು ಬಹುಮಾದರಿಯ ಏಕೀಕರಣಕ್ಕೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.

ಕೇಂದ್ರೀಯ ವಿದ್ಯಾಲಯ, ಮತ್ತಿಕೆರೆ, ಜಯರಾಮ ಸ್ಲಂ ಕಾಲೊನಿ, ಬೆನ್ನಿಗಾನಹಳ್ಳಿ ನಿಲ್ದಾಣ ಜಾಗಕ್ಕೆ ಕೆಎಫ್‌ಡಬ್ಲ್ಯು ಅಭಿವೃದ್ಧಿ ಬ್ಯಾಂಕ್‌ ಮತ್ತು ಇಇಬಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿಡಾರ್‌–2ರ ಎತ್ತರಿಸಿದ ಮಾರ್ಗದ ಭಾಗವಾಗಿರುವ ಹೆಬ್ಬಾಳದಲ್ಲಿ ಸಸಿ ನೆಟ್ಟರು. 

ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಎನ್‌. ಮಂಜುಳಾ, ಕೆ–ರೈಡ್‌ ಪ್ರಾಜೆಕ್ಟ್‌ ಮತ್ತು ಪ್ಲ್ಯಾನಿಂಗ್‌ ನಿರ್ದೇಶಕ ಆರ್‌.ಕೆ. ಸಿಂಗ್‌, ಇಇಬಿ ಸಾರಿಗೆ ಎಂಜಿನಿಯರ್‌ ಜೊಲ್ಟಾನ್‌ ಡೊನಾಥ್‌, ಪ್ಯಾಟ್ರಿಸಿಯಾ ಇಮ್ಲರ್‌, ಕೆಎಫ್‌ಡಬ್ಲ್ಯು ಬ್ಯಾಂಕ್‌ನ ಸಾರಿಗೆ ವಿಭಾಗದ ಸ್ಥಳೀಯ ವಲಯ ತಜ್ಞ ಅನುದೀಪ್‌ ಕೊನಿಕಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.