ADVERTISEMENT

ಐಐಟಿ ಮಾದರಿ: ₹ 850 ಕೋಟಿಗೆ ಯುವಿಸಿಇ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 21:56 IST
Last Updated 11 ಅಕ್ಟೋಬರ್ 2023, 21:56 IST
Venugopala K.
   Venugopala K.

ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯವನ್ನು (ಯುವಿಸಿಇ) ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹ 850 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಯುವಿಸಿಇ ಆಡಳಿತಮಂಡಳಿಯ ಅಧ್ಯಕ್ಷ ಬಿ. ಮುತ್ತುರಾಮನ್ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚವಾರ್ಷಿಕ ಯೋಜನೆಗಾಗಿ ಕೇಳಿರುವ ₹ 850 ಕೋಟಿಯಲ್ಲಿ ₹225 ಕೋಟಿ ವೇತನಕ್ಕೆ ವ್ಯಯವಾಗಲಿದೆ. ₹ 125 ಕೋಟಿ ವಿವಿ ನಿರ್ವಹಣೆಗೆ, ₹ 500 ಕೋಟಿ ಮೂಲಸೌಕರ್ಯ ಹಾಗೂ ಉಪಕರಣಗಳ ಖರೀದಿಗೆ ಬಳಕೆಯಾಗಲಿದೆ. ಐಐಟಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಕಳೆದ ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ನೀಡಿದೆ. ಇದನ್ನು ಶೀಘ್ರದಲ್ಲೇ ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು’ ಎಂದು ಹೇಳಿದರು.

‘ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 50 ರಿಂದ 100 ಎಕರೆ ಜಾಗವನ್ನು ಕೇಳಲಾಗಿದೆ. ಜಾಗ ಮಂಜೂರಾಗಿ ಕಟ್ಟಡಗಳನ್ನು ನಿರ್ಮಿಸಿದ ಬಳಿಕ ಅಲ್ಲಿಗೆ ಯುವಿಸಿಇ ಸ್ಥಳಾಂತರಿಸಲಾಗುತ್ತದೆ. ಅಲ್ಲಿಯವರೆಗೂ ಕೆ.ಆರ್.ವೃತ್ತದಲ್ಲಿಯೇ ಮುಂದುವರಿಯಲಿದೆ’ ಎಂದು ತಿಳಿಸಿದರು.

ADVERTISEMENT

ಕೆಇಎ ಮೂಲಕವೇ ಸೀಟು ಹಂಚಿಕೆ: ಯುವಿಸಿಇ ಪ್ರಾಂಶುಪಾಲ ಪ್ರೊ.ಎಚ್.ಎನ್.ರಮೇಶ್, ‘ಮುಂದಿನ ಐದು ವರ್ಷಗಳು ಯುವಿಸಿಇಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕವೇ ಸೀಟು ಹಂಚಿಕೆಯಾಗಲಿದೆ. ಐಐಟಿ ಮಾದರಿಯಲ್ಲಿ ಅಭಿವೃದ್ಧಿಯಾದ ಬಳಿಕ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಜೆಇಇ ಪ್ರವೇಶ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಮೂಲಸೌಕರ್ಯ, ಸಿಬ್ಬಂದಿ, ಉಪಕರಣಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾದ ಬಳಿಕ ಜೆಇಇ ಪ್ರವೇಶ ಕಲ್ಪಿಸಲಾಗುತ್ತದೆ’ ಎಂದು ಹೇಳಿದರು.

‘139 ಬೋಧಕ ಮತ್ತು 203 ಬೋಧಕೇತರ ಹುದ್ದೆ ಮಂಜೂರಾಗಿವೆ. ಆದರೆ, ಕ್ರಮವಾಗಿ 73 ಮತ್ತು 35 ಸಿಬ್ಬಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ಪಡೆದು ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.