ಬೆಂಗಳೂರು: ಹಣಕ್ಕಿಂತ ಸಮಯ ಬಹಳ ಮುಖ್ಯ ಎಂದು ಅರಿತಿದ್ದ ಎಂ. ವಿಶ್ವೇಶ್ವರಯ್ಯ ಅವರು ಸಮಯವನ್ನು ವ್ಯರ್ಥ ಮಾಡದೇ ಕಾರ್ಯನಿರ್ವಹಿಸಿದ್ದರು ಎಂದು ಸಾಹಿತಿ ಆರ್. ಲಕ್ಷ್ಮೀನಾರಾಯಣ ತಿಳಿಸಿದರು.
ಕರ್ನಾಟಕ ವಿಕಾಸ ರಂಗ ಮತ್ತು ಕನ್ನಡ ಗೆಳೆಯರ ಬಳಗ ಹಮ್ಮಿಕೊಂಡಿದ್ದ ‘ಕನ್ನಡ ಬಾವುಟ ಹಾರಿಸಿದವರು’ ಉಪನ್ಯಾಸ ಮಾಲಿಕೆ–13ರಲ್ಲಿ ಅವರು ಮಾತನಾಡಿದರು.
ಭದ್ರಾವತಿ ಉಕ್ಕು ಕಾರ್ಖಾನೆ, ಮೈಸೂರು ಲ್ಯಾಂಪ್ಸ್, ಸೋಪು ಕಾರ್ಖಾನೆ, ಶಿಂಸಾ ಜಲವಿದ್ಯುತ್ ಯೋಜನೆ, ಮೈಸೂರು ವಿಶ್ವವಿದ್ಯಾಲಯ, ಪಾಲಿಟೆಕ್ನಿಕ್, ಬೆಂಗಳೂರು ಎಂಜಿನಿಯರಿಂಗ್ ಕಾಲೇಜು, ಮೈಸೂರು ಬ್ಯಾಂಕ್ ಹೀಗೆ ಅನೇಕ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದರು ಎಂದು ನೆನಪು ಮಾಡಿಕೊಂಡರು.
ಕೆ.ಆರ್. ಜಲಾಶಯವನ್ನು 90 ಅಡಿಯಿಂದ 124 ಅಡಿಗಳಿಗೆ ಎತ್ತರಿಸುವಲ್ಲಿ ವಿಶ್ವೇಶ್ವರಯ್ಯ ಅವರ ತಾಂತ್ರಿಕ ಪರಿಣತಿ ಕೆಲಸ ಮಾಡಿತ್ತು. 1924ರಲ್ಲಿ ಕಾವೇರಿ ಒಪ್ಪಂದ ಆದಾಗ ಮೈಸೂರು ಸಂಸ್ಥಾನಕ್ಕೆ ಅನ್ಯಾಯವಾಯಿತು ಎಂದು ವಿಶ್ವೇಶ್ವರಯ್ಯ ಕಣ್ಣೀರು ಹಾಕಿದ್ದರು. ಈಗಲೂ ಈ ಅನ್ಯಾಯದ ಫಲವನ್ನು ಕನ್ನಡಿಗರಲ್ಲಿ ಅನುಭವಿಸುತ್ತಿದ್ದಾರೆ ಎಂದು ಸಾಹಿತಿ ರಾ.ನಂ. ಚಂದ್ರಶೇಖರ ಹೇಳಿದರು.
ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಅಧ್ಯಕ್ಷತೆ ವಹಿಸಿದ್ದರು. ಎಚ್‌ಎಎಲ್ ನಿವೃತ್ತ ಎಂಜಿನಿಯರ್ ಬಾ.ಹ. ಉಪೇಂದ್ರ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.