ಬೆಂಗಳೂರು: ಮಹಿಳೆಯರು ಸೇರಿದಂತೆ ಪ್ರಯಾಣಿಕರ ಭದ್ರತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವ ಯೋಜನೆ ರಾಜ್ಯದಲ್ಲಿ ಡಿ.1ರಿಂದ ಜಾರಿಗೆ ಬರಲಿದೆ.
ಸಾರ್ವಜನಿಕ ಸೇವಾ ವಾಹನಗಳಲ್ಲದೇ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಾಣಿಕ ವಾಹನಗಳು ಕೂಡ ವಿಎಲ್‌ಟಿ ಮತ್ತು ಪ್ಯಾನಿಕ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಹಳದಿ ನಂಬರ್ ಪ್ಲೇಟ್ ಹೊಂದಿದ್ದರೂ ಸ್ಟೇಟ್ ಪರ್ಮಿಟ್ ಇರುವ ಗೂಡ್ಸ್ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ. 2024ರ ನ.30ರ ವರೆಗೆ ಈ ಸಾಧನ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಇನ್ ಬಸ್ ಸರ್ವೆಲೆನ್ಸ್ ವ್ಯವಸ್ಥೆ: ನಿರ್ಭಯಾ ಯೋಜನೆಯಡಿ ಬಿಎಂಟಿಸಿಯ 5,000 ಬಸ್‌ಗಳಲ್ಲಿ ಮಹಿಳಾ ಸುರಕ್ಷತೆಗಾಗಿ ಇನ್ ಬಸ್ ಸರ್ವೆಲೆನ್ಸ್ ವ್ಯವಸ್ಥೆ ಮತ್ತು ಬಸ್ ನಿಲ್ಧಾಣಗಳಲ್ಲಿ ಪ್ರಯಾಣಿಕರ ಮಾಹಿತಿ ಪ್ರದರ್ಶಿಸುವ ಮೊಬೈಲ್ ಅಪ್ಲೀಕೇಶನ್ ಒಳಗೊಂಡ ಅಟೊಮೆಟಿಕ್ ವೆಹಿಕಲ್ ಲೊಕೇಶನ್ ಸಿಸ್ಟಂ (ಎವಿಎಲ್‌ಎಸ್) ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಈಗಾಗಲೇ ಬಿಎಂಟಿಸಿಯ ವಾಹನಗಳಲ್ಲಿ ಆಂಥ್ರೊಪ್ರೊಮೊರ್ಫಿಕ್ ಡಿವೈಸ್ (ಎಟಿಡಿ), ಪ್ಯಾನಿಕ್ ಬಟನ್ , ಮೊಬೈಲ್ ನೆಟ್‌ವರ್ಕ್ ವಿಡಿಯೊ ರೆಕಾರ್ಡರ್ (ಎಂಎನ್‌ವಿಆರ್) ತಲಾ ಒಂದೊಂದು ಹಾಗೂ ಎರಡು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಬಸ್ಸಿನಲ್ಲಿ ಅಹಿತಕರ ಘಟನೆಗಳು ನಡೆದರೆ ಮಹಿಳೆಯರು ಈ ಬಟನ್‌ಗಳನ್ನು ಒತ್ತಿ ಮಾಹಿತಿ ನೀಡಬಹುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ತೊಂದರೆಯಾದಾಗ ಮಾತ್ರವಲ್ಲ, ಸಿಬ್ಬಂದಿ–ಪ್ರಯಾಣಿಕರ ನಡುವೆ ಜಗಳ ಉಂಟಾದರೆ, ಪ್ರಯಾಣಿಕರೇ ಜಗಳ ಮಾಡಿಕೊಂಡರೆ ಈ ಬಟನ್ ಒತ್ತಿದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ಹೋಗುತ್ತದೆ. ಅಲ್ಲಿಂದ ಟ್ರ್ಯಾಕ್ ಸಿಬ್ಬಂದಿ ಆ ವಾಹನವನ್ನು ಪತ್ತೆ ಹಚ್ಚಿ, ಅಲ್ಲಿಗೆ ಸಾರಥಿ ವಾಹನಗಳು ತೆರಳಿ ಮುಂದಿನ ಕ್ರಮ ಕೈಗೊಳ್ಳುವರು. ಅಗತ್ಯ ಬಿದ್ದರೆ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗುತ್ತದೆ ಎಂದರು.
ಇನ್ ಬಸ್ ಸರ್ವೆಲೆನ್ಸ್ ವ್ಯವಸ್ಥೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.