ಬೆಂಗಳೂರು: ‘ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಒಕ್ಕಲಿಗರು ಉದ್ಯಮ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಆ ಮೂಲಕ ಉದ್ಯೋಗ ನೀಡುವವರೂ ಆಗಬೇಕು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಉದ್ಯಮಿಕ ಒಕ್ಕಲಿಗ ಎಕ್ಸ್‌ಪೋ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ‘ಹಿಂದಿನ ದಿನಗಳಲ್ಲಿ ಜಮೀನಿನ ಒಡೆತನ ಇದ್ದವರಷ್ಟೇ ಜಗತ್ತನ್ನು ಆಳುತ್ತಿದ್ದರು. ಈಗ ಜ್ಞಾನವಂತರು ಜಗತ್ತನ್ನು ಆಳುತ್ತಿದ್ದಾರೆ. ಒಕ್ಕಲಿಗರು ಜ್ಞಾನಾರ್ಜನೆಗೆ ಒತ್ತು ನೀಡಬೇಕು’ ಎಂದರು.
ಕೃಷಿ ಚಟುವಟಿಕೆಗಳಿಂದ ದೇಶದ ಉದ್ಯಮ ವಲಯಗಳು ಅಭಿವೃದ್ಧಿ ಹೊಂದುತ್ತವೆ. ಆದರೆ, ಕೃಷಿ ಚಟುವಟಿಕೆ ನಡೆಸುವವರು ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಕೃಷಿಯನ್ನು ಮಾತ್ರ ನೆಚ್ಚಿಕೊಂಡರೆ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿಯ ಜತೆಯಲ್ಲೇ ವ್ಯಾಪಾರ, ಉದ್ಯೋಗಕ್ಕೂ ಒತ್ತು ನೀಡಬೇಕು’ ಎಂದು ಹೇಳಿದರು.
ಜಮೀನು ಮಾರಿ ಚುನಾವಣೆಗೆ ಸ್ಪರ್ಧಿಸುವವರು ಒಕ್ಕಲಿಗ ಸಮುದಾಯದಲ್ಲಿ ಜಾಸ್ತಿ ಇದ್ದಾರೆ. ಈಗ ಉದ್ಯಮ ಮತ್ತು ಉದ್ಯೋಗದಲ್ಲಿ ಛಲದಿಂದ ದುಡಿಯಬೇಕು ಎಂದರು.
ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.