ಬೆಂಗಳೂರು: ವೃಷಭಾವತಿ (ಕೆಂಗೇರಿ ಬಳಿ) ಕಾಲುವೆಯ ನೀರು ಕಪ್ಪಿಟ್ಟಿದೆ. ಅದೇ ರೀತಿ ಅಪಾಯವನ್ನೂ ಕಟ್ಟಿಟ್ಟಿದೆ. ಕಳೆದ ವರ್ಷ ಸೆ.9ರಂದು ಮಧ್ಯರಾತ್ರಿ ಸುರಿದ ಮಳೆ ವೃಷಭಾವತಿ ಕಣಿವೆ ಪ್ರದೇಶದಲ್ಲಿ ಸೃಷ್ಟಿಸಿದ ಅಧ್ವಾನ ಇನ್ನೂ ಜನರ ಕಣ್ಣಮುಂದಿದೆ. ತುಂಬಿರುವ ಹೂಳು, ತ್ಯಾಜ್ಯದ ರಾಶಿ, ಮತ್ತಷ್ಟು ಬೀಳುತ್ತಿರುವ ಕಟ್ಟಡ ತ್ಯಾಜ್ಯ, ನೀರು ಕಾಲುವೆ ತುಂಬಿ ಹರಿಯುವಂತೆ ಮಾಡುತ್ತಿದೆ.
‘ರಸ್ತೆಯ ಪಾರ್ಶ್ವಕ್ಕೆ ತಡೆಗೋಡೆ ನಿರ್ಮಿಸಲಾಗಿದೆಯಾದರೂ ಅದನ್ನು ಮೀರಿ ನೀರು ರಸ್ತೆಗೆ ಹರಿಯುವ ಸಾಧ್ಯತೆ
ಯನ್ನು ತಳ್ಳಿಹಾಕುವಂತಿಲ್ಲ’ ಎನ್ನುತ್ತಾರೆ ಮೆಟ್ರೊ ಸೇತುವೆ ನಿರ್ಮಾಣದ ಕಾರ್ಮಿಕರು.
‘ರಾತ್ರಿಯಿಡೀ ಮಳೆ ಸುರಿದಿತ್ತು. ಹೇಗೋ ಕಷ್ಟಪಟ್ಟು ನಾಯಂಡಹಳ್ಳಿವರೆಗೆ ಗಾಡಿ ತಂದು ನಿಲ್ಲಿಸಿದೆ. ಆ ವೇಳೆಗಾಗಲೇ ಮೈಸೂರು ರಸ್ತೆಯ ಈ ಪ್ರದೇಶದಲ್ಲಿ ಸಂಚಾರ ಬ್ಲಾಕ್ ಆಗಿತ್ತು. ಕುತೂಹಲದಿಂದ ಇತ್ತ ಬಂದು ನೋಡಿದೆ. ಒಂದು ಬಸ್ ನೀರಿನ ಮಧ್ಯೆ ಸಿಲುಕಿತ್ತು. ಸುಮಾರು ಅರ್ಧ ದಿನ ಚಾಲಕರು, ಪ್ರಯಾಣಿಕರು ಪರ
ದಾಡಿದರು. ನೀರು ಹೊರಹರಿಯಬೇಕಾದ ಕಾಲುವೆಯೇ ಪಥ ಬದಲಿಸಿದರೆ ನೀರನ್ನು ಎತ್ತಿ ಹಾಕುವುದಾದರೂ ಎಲ್ಲಿಗೆ’ ಎಂದು ಪ್ರಶ್ನಿಸಿದರು ಖಾಸಗಿ ಬಸ್ ಚಾಲಕ ನಜೀರ್.
‘ಸ್ಕೂಟರೊಂದು ನೀರಿನಲ್ಲಿ ಕೊಚ್ಚಿ ಹೋಗಿ ಹೂಳಿನ ನಡುವೆ ಸಿಲುಕಿತ್ತು. ಕಾರು ಗ್ಯಾರೇಜ್‌ಗೆ ಕೊಳಚೆ ನೀರು ನುಗ್ಗಿ ವಾಹನ, ಬಿಡಿಭಾಗಗಳೆಲ್ಲಾ ಹಾನಿಗೊಂಡಿದ್ದವು. ಮೆಟ್ರೊ ಪಿಲ್ಲರ್ ಕಾಮಗಾರಿ ನಡೆಯುತ್ತಿದ್ದ ಮುಖ್ಯರಸ್ತೆಯಂತೂ ಕೆಸರು ಗದ್ದೆಯಾಗಿತ್ತು. ಸೇತುವೆಯಂಚಿಗೆ ಬಂದು ಉಕ್ಕುವ ನೀರು ಪ್ರತಿ ಕ್ಷಣಕ್ಕೂ ಗಾಬರಿ ಹುಟ್ಟಿಸುತ್ತಿತ್ತು. ಈ ನಡುವೆ ಕೆಲವರು ಮೀನು ಹಿಡಿದರು. ಒಂದೆಡೆ ಅಪಾಯ, ಇನ್ನೊಂದೆಡೆ ತಮಾಷೆಯ ಪ್ರಸಂಗಗಳು ಅಂದು ನಡೆದಿದ್ದವು’ ಎಂದು ಆಟೊ ಚಾಲಕರು ನೆನಪಿಸಿಕೊಂಡರು.
ಈಗ ಹೇಗಿದೆ?: ‘ಬಲ ಪಾರ್ಶ್ವಕ್ಕೆ (ಹೆದ್ದಾರಿಯ ಭಾಗ) ದಪ್ಪ ಕಾಂಕ್ರೀಟ್ ಸ್ಲ್ಯಾಬ್‌ಗಳ ಗೋಡೆ ನಿರ್ಮಿಸಲಾಗಿದೆ. ಎಡ ಪಾರ್ಶ್ವದಲ್ಲಿ, ಕೈಗಾರಿಕಾ ಘಟಕಗಳ ಮಾಲೀಕರು ತಮ್ಮ ನಿವೇಶನಗಳ ಸುತ್ತ ಗೋಡೆ ಕಟ್ಟಿದ್ದಾರೆ. ನೀರಿನ ವೇಗ ಹೆಚ್ಚಾಗಿ ದಂಡೆ ಸವಕಳಿಯಾಗಿ ಭೂಮಿ ಕುಸಿದರೆ ಗೋಡೆ ಉಳಿಯುವುದೂ ಅಸಾಧ್ಯ. ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿವೆ. ಇಂಥ ಪ್ರದೇಶಗಳಲ್ಲಿ ಹರಿದ ನೀರು ಉಳಿದ ಪ್ರದೇಶಗಳತ್ತ ಹರಿಯುವುದು ಖಾತ್ರಿ’ ಎನ್ನುತ್ತಾರೆ ಕೈಗಾರಿಕಾ ಘಟಕಗಳ ಕಾರ್ಮಿಕರು.
‘ಮಳೆ ನೀರು– ಕೊಚ್ಚೆ ನೀರು ಮಿಶ್ರವಾಗಿ ಉಕ್ಕಿ ಹರಿದಾಗ ಈ ಪ್ರದೇಶದಲ್ಲಿ ಅಸಹನೀಯ ವಾತಾವರಣ ಸೃಷ್ಟಿಯಾಗುತ್ತದೆ. ಅದು ಸರಿಯಾಗಬೇಕಾದರೆ ವಾರಗಟ್ಟಲೆ ಸಮಯ ಬೇಕು’ ಎಂದರು ಇಲ್ಲಿನ ಕಾರ್ಖಾನೆಯೊಂದರಲ್ಲಿ ಸ್ವಚ್ಛತೆ ಕೆಲಸ ಮಾಡುವ ಮಹಿಳೆಯರು.
ಈ ನಡುವೆ ಬೃಹತ್ ಕಾಂಕ್ರೀಟ್ ಪೈಪ್‌ಗಳನ್ನು ಕಾಲುವೆ ಪ್ರದೇಶದಲ್ಲಿ ಇರಿಸಲಾಗಿದೆ. ಇವುಗಳನ್ನು ಎಲ್ಲಿ ಬಳಸಲಾಗುತ್ತದೆ ಎಂಬುದು ಗೊತ್ತಾಗಿಲ್ಲ. ಅಲ್ಲಲ್ಲಿ ಡೀಸೆಲ್ ಚಾಲಿತ ಪಂಪ್‌ಸೆಟ್‌ಗಳು ಇವೆ. ಕಾಲುವೆ ಮಧ್ಯೆ ಬಾವಿ ನಿರ್ಮಿಸಿ ರಿಂಗ್ ಅಳವಡಿಸಲಾಗಿದೆ. ಆದರೆ, ಅದರಿಂದ ಉಪಯೋಗವೇನು ಎಂದು ಯಾರಿಗೂ ಗೊತ್ತಿಲ್ಲ. ಶುದ್ಧ ನೀರು ಹರಿಯುತ್ತಿದ್ದ ಕಾಲುವೆ ಈಗ ಸರಿಪಡಿಸಲಾಗದ ಹಂತಕ್ಕೆ ಬಂದಿದೆ.
‘ಮಳೆ ಇಲ್ಲದಿದ್ದರೂ ಇಲ್ಲಿ ಕೊಳಚೆ ನೀರಿನ ಹರಿವಿನ ವೇಗ ಜಾಸ್ತಿ ಇದೆ. ಇದರ ಜತೆ ಮಳೆ ನೀರು ಸೇರಿದರೆ ವೃಷಭಾವತಿಯ ಆರ್ಭಟ ನಿಯಂತ್ರಣಕ್ಕೆ ಸಿಗದು. ಮೋರಿ ನೀರಿನ ವಾಸನೆ ಸುತ್ತಲೂ ಹಬ್ಬಿದ ಕಾರಣಕ್ಕೆ ಚಹದಂಗಡಿ, ಕ್ಯಾಂಟೀನ್‌ಗಳಲ್ಲಿ ಆಹಾರ ಪದಾರ್ಥಗಳ ವ್ಯಾಪಾರ ಗಣನೀಯ ಕುಸಿದಿದೆ. ನಾವು ಎಷ್ಟೇ ಸ್ವಚ್ಛತೆ ಕಾಪಾಡಿದರೂ ಇಲ್ಲಿನ ಪರಿಸರ ನೋಡಿದ ಗ್ರಾಹಕರು ಅಸಹ್ಯಪಟ್ಟು
ಕೊಳ್ಳುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ವ್ಯಾಪಾರಿಗಳು.
ಈಗ ಆಗಬೇಕಾಗಿರುವುದೇನು?
ಕಾಲುವೆಯ ಹೂಳು ತೆಗೆದು ಸಹಜವಾಗಿ ನೀರು ಹರಿದು ಹೋಗುವಂತೆ ಮಾಡಿದರೆ ಸಾಕು. ಅದು ಬಿಬಿಎಂಪಿ ಮುಂದಿರುವ ದೊಡ್ಡ ಸವಾಲು. ಏಕೆಂದರೆ ಹೂಳು, ತ್ಯಾಜ್ಯ ಸೇರಿ ಕಾಲುವೆ ಮಧ್ಯೆ ದಿಬ್ಬಗಳನ್ನೇ ನಿರ್ಮಿಸಿವೆ. ಸುತ್ತ ಗಿಡಗಳು ಬೆಳೆದಿವೆ. ಸುತ್ತಮುತ್ತಲಿನ ಗ್ಯಾರೇಜ್‌ನವರಿಗೆ ನಿರುಪಯುಕ್ತ ವಸ್ತುಗಳನ್ನು ಹಾಕುವ ತಾಣವೂ ಇದೇ ಆಗಿದೆ. ಇದನ್ನು ತಡೆಗಟ್ಟಲು ಹತ್ತಾರು ಕಿಲೋಮೀಟರ್‌ನಷ್ಟು ದೂರ ತಡೆಬೇಲಿ ನಿರ್ಮಿಸುವ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.