ADVERTISEMENT

ನೆಲಮಂಗಲ: ವಿಎಸ್‌ಎಸ್‌ಎನ್‌ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:34 IST
Last Updated 16 ಸೆಪ್ಟೆಂಬರ್ 2024, 14:34 IST
ನೆಲಮಂಗಲ ವಿಎಸ್‌ಎಸ್‌ಎನ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎನ್.ಶ್ರೀನಿವಾಸ್‌ (ಎಡದಿಂದ ಎರಡನೆಯವರು) ಶಂಕುಸ್ಥಾಪನೆ ನೆರವೇರಿಸಿದರು
ನೆಲಮಂಗಲ ವಿಎಸ್‌ಎಸ್‌ಎನ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎನ್.ಶ್ರೀನಿವಾಸ್‌ (ಎಡದಿಂದ ಎರಡನೆಯವರು) ಶಂಕುಸ್ಥಾಪನೆ ನೆರವೇರಿಸಿದರು   

ನೆಲಮಂಗಲ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ವಿಎಸ್‌ಎಸ್‌ಎನ್‌) ಕಟ್ಟಡ ಪೂರ್ಣವಾದ ಮೇಲೆ ಒಳ ವಿನ್ಯಾಸ ಹಾಗೂ ಸಂಘದ ಗೋದಾಮುಗಳಿಗೆ ಶಾಸಕರ ಅನುದಾನದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಎನ್.ಶ್ರೀನಿವಾಸ್‌ ಭರವಸೆ ನೀಡಿದರು.

ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ನೂತನ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

’₹ 50 ಲಕ್ಷ ವೆಚ್ಚದಲ್ಲಿ ಭಕ್ತನಪಾಳ್ಯದ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು.

ADVERTISEMENT

ಸಹಕಾರ ಸಂಘದ ಅಧ್ಯಕ್ಷ ಬಿ.ಎನ್‌.ನರಸಿಂಹಮೂರ್ತಿ ಮಾತನಾಡಿ ‘ರಾಷ್ಟ್ರೀಯ ಸಹಕಾರ ಅಭಿವೃದ್ದಿ ಪ್ರಾಧಿಕಾರದಿಂದ (ಎನ್‌ಸಿಡಿಸಿ) ಗೋದಾಮು, ವಾಣಿಜ್ಯ ಮಳಿಗೆ, ಕಚೇರಿ ಒಳಗೊಂಡ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ₹1.20 ಕೋಟಿ ಬಡ್ಡಿ ರಹಿತ ಸಾಲ ಮಂಜೂರಾಗಿದೆ. ಇದರಲ್ಲಿ ₹26.50 ಲಕ್ಷ ಸಬ್ಸಿಡಿ ದೊರೆತಿದೆ. ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು’ ಎಂದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಲೋಲಾಕ್ಷಿ ಗಂಗಾಧರ್‌, ಸಹಕಾರಿ ಮುಖಂಡರಾದ ಕೇಶವಮೂರ್ತಿ, ಹನುಮಂತೇಗೌಡ, ಸಂಪತ್‌ಬಾಬು, ಗುರುಪ್ರಕಾಶ್‌, ಎನ್‌.ಪಿ.ಹೇಮಂತಕುಮಾರ್‌, ಪಿಳ್ಳಪ್ಪ, ಜಗಜ್ಯೋತಿ ಬಸವೇಶ್ವರ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.