ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳನ್ನು ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಈಗಾಗಲೇ ಪರಿಷತ್ತಿನಲ್ಲಿ ಕಲಾಪದ ವೇಳೆ ವಕ್ಫ್ ಸಚಿವ ಜಮೀರ್ ಅಹಮದ್ ಅವರು ಅನ್ವರ್ ಮಾಣಿಪ್ಪಾಡಿ ವರದಿ ಆಧರಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ಭರವಸೆ ನೀಡಿದರು. ವಿಳಂಬ ಮಾಡಿದರೆ ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಚಿವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ವಕ್ಫ್ ಆಸ್ತಿ ಕಬಳಿಕೆ ತೆರವುಗೊಳಿಸಿದರೆ, ಸಾವಿರಾರು ಕೋಟಿ ಆಸ್ತಿ ಸರ್ಕಾರದ ಸುಪರ್ದಿಗೆ ಬರುತ್ತದೆ ಎಂದರು.
ಕಲಾಪದ ವೇಳೆ ಸದಸ್ಯ ಅರುಣ್ ಶಹಾಪೂರ ಅವರ ಪ್ರಶ್ನೆಗೆ ಗುರುವಾರ ಉತ್ತರಿಸಿ, ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಹಸ್ತಾಂತರಿಸಲು ಸಿದ್ಧ ಎಂದಿದ್ದರು. ಅದಾದ 10 ನಿಮಿಷಗಳ ಬಳಿಕ ಆ ರೀತಿ ಹೇಳಿಯೇ ಇಲ್ಲ ಎಂದು ಸಚಿವ ಜಮೀರ್ ಉಲ್ಟಾ ಹೊಡೆದಿದ್ದರು. ಈ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ, ಸಚಿವರು ಏನು ಹೇಳಿಕೆ ನೀಡಿದ್ದಾರೆ ಎಂಬುದನ್ನು ಕಡತ ಪರಿಶೀಲಿಸಿ ರೂಲಿಂಗ್ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದರು.
ಕಡತ ತರಿಸಿ ನೋಡಿದಾಗ ಸಿಬಿಐ ತನಿಖೆಗೆ ಒಪ್ಪಿಕೊಳ್ಳುತ್ತೇನೆ ಎಂದು ಸಚಿವರು ಹೇಳಿರುವುದು ದಾಖಲಾಗಿತ್ತು. ಸಭಾಪತಿಯವರು ಸಚಿವರ ಉತ್ತರವನ್ನು ಅನುಮೋದಿಸಿದ್ದಾರೆ. ಅದನ್ನು ಸ್ವಾಗತಿಸುವುದಾಗಿ ಪೂಜಾರಿ ತಿಳಿಸಿದರು.
ಮೊಟಕು ಸರಿಯಲ್ಲ: ವಿಧಾನಪರಿಷತ್ ಕಲಾಪವನ್ನು ಮೊಟಕುಗೊಳಿಸಿದ್ದು ಸರಿಯಲ್ಲ. ಸಾಕಷ್ಟು ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಮಸ್ಯೆಗಳು ಬಗೆಹರಿಯದೇ ಉಳಿದಿವೆ. ವರ್ಷದಲ್ಲಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂಬ ನಿರ್ಣಯವೇ ಆಗಿದೆ. ಅದರ ಪಾಲನೆ ಆಗುತ್ತಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.