ಬೆಂಗಳೂರು: ಮೈಸೂರು ರಸ್ತೆಯಲ್ಲಿ ಮುಕ್ತ ಸಂಚಾರ, ರಾಜರಾಜೇಶ್ವರಿನಗರ, ನಾಯಂಡಹಳ್ಳಿ, ಜ್ಞಾನಭಾರತಿ ಕಡೆಗೆ ಸಿಗ್ನಲ್ ರಹಿತ ಸಂಚಾರ ಒದಗಿಸಲು ಎರಡು ವರ್ಷದ ಹಿಂದೆ ಆರಂಭವಾದ ‘ಸಿಗ್ನಲ್ ಫ್ರೀ ರೋಟರಿ’ ಕಾಮಗಾರಿ ಸ್ಥಗಿತಗೊಂಡು ವರ್ಷ ಕಳೆದಿದೆ.
ಮೇಲ್ಸೇತುವೆಗಾಗಿ ನಿರ್ಮಿಸಲಾಗಿರುವ ನಾಲ್ಕೈದು ಪಿಲ್ಲರ್‌ಗಳು ತುಕ್ಕು ಹಿಡಿಯುತ್ತಿದ್ದು, ಕಂಬಿಗಳೇ ಹೆಚ್ಚು ಉಳಿದುಕೊಂಡಿರುವ ಒಂದು ಪಿಲ್ಲರ್‌ಗೆ ಹೊಂದಿಕೊಂಡಂತೆ ಭೂಮಾಲೀಕರು ಇತ್ತೀಚೆಗೆ ತಡೆಗೋಡೆಯನ್ನೂ ಕಟ್ಟಿದ್ದಾರೆ. ಗೇಟ್ ಅಳವಡಿಸಿ, ವಾಹನಗಳು ಓಡಾಡಲು ಮೈಸೂರು ರಸ್ತೆಯ ಚರಂಡಿ ಮೇಲೆ ಸಿಮೆಂಟ್ ಹಾಕಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಹೀಗಾಗಿದ್ದು, ಬಿಬಿಎಂಪಿ ಅಥವಾ ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ.
ನಾಯಂಡಹಳ್ಳಿಯಿಂದ ಕೆಂಗೇರಿ ಹಾಗೂ ರಾಜರಾಜೇಶ್ವರಿನಗರದ ಕಡೆಗೆ, ರಾಜರಾಜೇಶ್ವರಿನಗರದಿಂದ ನಾಯಂಡಹಳ್ಳಿ ಹಾಗೂ ಜ್ಞಾನಭಾರತಿ ಕಡೆಗೆ ಸಿಗ್ನಲ್ ರಹಿತ ಮೇಲ್ಸೇತುವೆಯನ್ನು ನಿರ್ಮಿಸಲು 2021ರಲ್ಲಿ ಯೋಜನೆ ರೂಪಿಸಿ, 2022ರಲ್ಲಿ ಕಾಮಗಾರಿಯನ್ನೂ ಆರಂಭಿಸಲಾಯಿತು. ಆರಂಭದಲ್ಲಿ ಅತಿ ಕ್ಷಿಪ್ರವಾಗಿ ನಡೆದ ಕಾಮಗಾರಿ, ವಿಧಾನಸಭೆ ಚುನಾವಣೆಯಾದ ಮೇಲೆ ನಿಂತುಹೋಗಿದೆ.
ಮೇಲ್ಸೇತುವೆ ಕಾಮಗಾರಿ ನಡೆದಿರುವ ಸ್ಥಳ ಇದೀಗ ಪಾಳುಬಿದ್ದಂತಾಗಿದ್ದು, ಮಣ್ಣು ಅಗೆಯುವ ಯಂತ್ರವೊಂದು ಅಲ್ಲೇ ನಿಂತು ತುಕ್ಕುಹಿಡಿಯುತ್ತಿದೆ. ಕಾಮಗಾರಿ ನಡೆದ ಸ್ಥಳದಲ್ಲಿ ಗಾಳಿ–ಮಳೆಗೆ ಮರದ ಕೊಂಬೆಗಳು ಬಿದ್ದಿವೆ.
‘ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಭೂಸ್ವಾಧೀನವಾಗಬೇಕಿದೆ. ಆದರೆ, ವೃಷಭಾವತಿ ಕಣಿವೆ ಮೇಲೆ ನಿರ್ಮಾಣವಾಗಬೇಕಿರುವ ಮೇಲ್ಸೇತುವೆಯ ಕಾಮಗಾರಿಯೂ ನಡೆಯದಿರುವುದು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಕಾರಣ’ ಎಂಬುದು ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ದೂರು.
‘ವಿಧಾನಸಭೆ ಚುನಾವಣೆಯ ನಂತರ ರಾಜಕೀಯ ಜಂಜಾಟದಿಂದ ಈ ಮೇಲ್ಸೇತುವೆ ಕಾಮಗಾರಿಗೆ ಹಿನ್ನಡೆಯಾಗಿದೆ. ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದರೂ ರಾಜಕೀಯ ಇಚ್ಛಾಶಕ್ತಿ ಇಲ್ಲದ್ದರಿಂದ ಕೇಳುವವರೇ ಇಲ್ಲದಂತಾಗಿದೆ’ ಎಂದು ಸ್ಥಳೀಯರಾದ ಪ್ರಸಾದ್, ಗೋಪಾಲ್, ರಾಮಸಿಂಗ್ ದೂರಿದರು.
ಎಲ್ಲ ಸಮಯವೂ ದಟ್ಟಣೆ!
‘ರಾಜರಾಜೇಶ್ವರಿನಗರ ಆರ್ಚ್ ಬಳಿ ಪ್ರತಿನಿತ್ಯವೂ ಎಲ್ಲ ಸಮಯದಲ್ಲೂ ವಾಹನ ದಟ್ಟಣೆಯೇ ಇರುತ್ತದೆ. ಮೇಲ್ಸೇತುವೆ ಕಾಮಗಾರಿ ಆರಂಭವಾದಾಗ ಶೀಘ್ರ ಮುಗಿಯುವ ಲಕ್ಷಣಗಳು ಕಂಡುಬಂದವು. ಆರ್ಚ್ ಒಳಗೆ ಮೇಲ್ಸೇತುವೆ ಹೋಗುವ ಬಗ್ಗೆ ಅಸಮಾಧಾನವಿದ್ದರೂ ವಾಹನ ಸಂಚಾರ ಸುಗಮವಾಗುತ್ತದೆ ಎಂಬ ಸಮಾಧಾನವಿತ್ತು. ಮೇಲ್ಸೇತುವೆ ಕಾಮಗಾರಿ ನಿಂತು ಒಂದು ವರ್ಷವಾಗಿದೆ. ದಟ್ಟಣೆ ಅಧಿಕವಾಗಿದೆ. ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ರಾಜರಾಜೇಶ್ವರಿನಗರದ ಟಿ.ಇ. ಶ್ರೀನಿವಾಸ್ ಒತ್ತಾಯಿಸುತ್ತಾರೆ.
ದೂರದೃಷ್ಟಿ ಇಲ್ಲದ ಯೋಜನೆ
‘ರಾಜರಾಜೇಶ್ವರಿನಗರದ ಆರ್ಚ್ ಜಂಕ್ಷನ್‌ನಲ್ಲಿ ಮುಕ್ತ ಸಂಚಾರದ ಉದ್ದೇಶ ಹೊಂದಿರುವ ಈ ಮೇಲ್ಸೇತುವೆ ಯೋಜನೆಗೆ ದೂರದೃಷ್ಟಿ ಇಲ್ಲ. ರಾಜರಾಜೇಶ್ವರಿನಗರದಿಂದ ಹಾಗೂ ಆ ಕಡೆಗೆ ವೃಷಭಾವತಿ ಕಣಿವೆ ಮೇಲೆ ಮೇಲ್ಸೇತುವೆ ನಿರ್ಮಿಸುವ ಯೋಜನೆ ಹೊಂದಲಾಗಿದೆ. ಇದರಿಂದ ಜ್ಞಾನಭಾರತಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಈಗಿರುವುದಕ್ಕಿಂತ ಮೂರುಪಟ್ಟು ಹೆಚ್ಛಾಗುತ್ತದೆ ಇನ್ನೂ ಕಾಮಗಾರಿ ಆರಂಭವಾಗಿಲ್ಲದಿರುವುದರಿಂದ ಇದನ್ನು ಮಾರ್ಪಡಿಸಬೇಕು’ ಎಂದು ಪಟ್ಟಣಗೆರೆಯ ಜಗದೀಶ್ ಅಭಿಪ್ರಾಯಪಟ್ಟರು.
‘ಗುತ್ತಿಗೆದಾರರಿಗೆ ₹10 ಲಕ್ಷ ದಂಡ’
‘ಗುತ್ತಿಗೆದಾರರಿಗೆ ಈವರೆಗಿನ ಕಾಮಗಾರಿಯ ಹಣ ಬಿಡುಗಡೆ ಮಾಡಿದ್ದೇವೆ. ಆದರೆ ಭೂಸ್ವಾಧೀನದ ಕಾರಣ ಮುಂದಿಟ್ಟು ಎಂದು ಸ್ಥಗಿತಗೊಳಿಸಿದ್ದಾರೆ. ಕೆಲಸ ಕೂಡಲೇ ಪ್ರಾರಂಭಿಸಲು ಸೂಚಿಸಲಾಗಿದೆ. ಈಗಾಗಿರುವ ವಿಳಂಬಕ್ಕೆ ಗುತ್ತಿಗೆದಾರರಿಗೆ ₹10 ಲಕ್ಷ ದಂಡವನ್ನೂ ಹಾಕಲಾಗಿದೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.