ADVERTISEMENT

ಅಲೆಮಾರಿಗಳಿಗೆ ಸಾಮಾಜಿಕ ನ್ಯಾಯ ಸಿಗಲಿ: ಎಚ್‌. ಕಾಂತರಾಜ

ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ l ರಾಜಕೀಯ ಪ್ರಾತಿನಿಧ್ಯ ನೀಡಲು ಎಚ್‌. ಕಾಂತರಾಜ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 21:09 IST
Last Updated 3 ಜನವರಿ 2023, 21:09 IST
ನಗರದಲ್ಲಿ ಮಂಗಳವಾರ ನಡೆದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವದಲ್ಲಿ ಜೋಗಿ ಜನಾಂಗದ ಕಲಾವಿದರು ಕಿನ್ನರಿ ನುಡಿಸಿದರು  – ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ನಡೆದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವದಲ್ಲಿ ಜೋಗಿ ಜನಾಂಗದ ಕಲಾವಿದರು ಕಿನ್ನರಿ ನುಡಿಸಿದರು  – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಲೆಮಾರಿ ಮತ್ತು ಅರೆ ಅಲೆಮಾರಿಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯ ಒದಗಿಸಬೇಕು’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌. ಕಾಂತರಾಜ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವದಲ್ಲಿ ಮಾತನಾಡಿದ ಅವರು, ‘ಅಲೆಮಾರಿ ಮತ್ತು ಅರೆ ಅಲೆಮಾರಿಗಳು ಹಿಂದುಳಿದ ವರ್ಗಗಳಲ್ಲೇ ಅತಿ ಹಿಂದುಳಿದವರು. ಇವರ ಬದುಕು ಇಂದು ಶೋಚನೀಯ ಸ್ಥಿತಿಯಲ್ಲಿದೆ’ ಎಂದು ವಿವರಿಸಿದರು.

‘ಕರ್ನಾಟಕದಲ್ಲಿ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳಿವೆ. ಈ ಸಮುದಾಯಗಳನ್ನು ಪ್ರವರ್ಗ–1ರಲ್ಲಿ ಸೇರಿಸಲಾಗಿದೆ. ಆದರೆ, ಪ್ರವರ್ಗ–1ರಲ್ಲಿ 95 ಸಮುದಾಯಗಳಿವೆ. ಉಳಿದ ಸಮುದಾಯಗಳ ಜತೆಗೆ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ, ಸರ್ಕಾರಿ ನೌಕರಿಯಿಂದ ವಂಚಿತರಾಗುತ್ತಿದ್ದಾರೆ.
ಜತೆಗೆ, ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಮತ್ತು ಈಗಿನ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ, ವಿಧಾನ ಪರಿಷತ್‌ ಮತ್ತು ರಾಜ್ಯಸಭೆಗೆ ಈ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ನಾಮಕರಣ ಮಾಡಬೇಕು’ ಎಂದು
ಆಗ್ರಹಿಸಿದರು.

ADVERTISEMENT

‘ಜನಸಂಖ್ಯೆಗೆ ಅನುಗುಣವಾಗಿಯೇ ಪ್ರವರ್ಗ–1ರಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕು ಎನ್ನುವ ಈ ಸಮುದಾಯಗಳ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು. ಆಧುನಿಕ ಯುಗದಲ್ಲಿ ಅಲೆಮಾರಿಗಳ ಕುಲಕಸಬುಗಳು ನಶಿಸುತ್ತಿವೆ. ಆದ್ದರಿಂದ, ಪರ್ಯಾಯ ಉದ್ಯೋಗಗಳನ್ನು ಕಲ್ಪಿಸಬೇಕು’ ಎಂದು ಕೋರಿದರು.

ವಿಧಾನ ಪರಿಷತ್ ಸದಸ್ಯ ಎಂ. ನಾಗರಾಜ್‌ ಮಾತನಾಡಿ, ‘ಶಿಕ್ಷಣಕ್ಕೆ ಸಮುದಾಯವು ಪ್ರಾತಿನಿಧ್ಯ ನೀಡಬೇಕು ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವ ಯುವಕರನ್ನು ಬೆಳೆಸಬೇಕು’ ಎಂದು ಸಲಹೆ
ನೀಡಿದರು.

ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಮಾತನಾಡಿ, ‘46 ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕು’ ಎಂದು ಕೋರಿದರು.

ಅಧ್ಯಕ್ಷ ತುಕರಾಮ ನಾಗಪ್ಪ ವಾಷ್ಠರ, ಪ್ರಧಾನ ಕಾರ್ಯದರ್ಶಿ ಪ್ರತಾಪ್‌ ಕುಮಾರ್ ಓ. ಜೋಗಿ
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.