ADVERTISEMENT

ಯಲಹಂಕ: ವಕ್ಫ್‌ ಮಂಡಳಿ ವಿರುದ್ಧ ಕಾಲ್ನಡಿಗೆ ಜಾಥಾ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 16:13 IST
Last Updated 4 ನವೆಂಬರ್ 2024, 16:13 IST
ವಕ್ಫ್‌ ಮಂಡಳಿ ವಿರುದ್ಧ ಬಿಜೆಪಿವತಿಯಿಂದ ಯಲಹಂಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಎಸ್‌.ಮುನಿರಾಜು ಭಾಗವಹಿಸಿದ್ದರು
ವಕ್ಫ್‌ ಮಂಡಳಿ ವಿರುದ್ಧ ಬಿಜೆಪಿವತಿಯಿಂದ ಯಲಹಂಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಎಸ್‌.ಮುನಿರಾಜು ಭಾಗವಹಿಸಿದ್ದರು   

ಯಲಹಂಕ: ರಾಜ್ಯದಲ್ಲಿ ರೈತರು, ದೇವಸ್ಥಾನಗಳು, ಮಠಗಳು ಹಾಗೂ ಶಾಲೆಗಳ ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ಯಲಹಂಕ, ದಾಸರಹಳ್ಳಿ ಹಾಗೂ ಬ್ಯಾಟರಾಯನಪುರ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಉಪನಗರದ ಶೇಷಾದ್ರಿಪುರ ಕಾಲೇಜಿನಿಂದ ಕಾಲ್ನಡಿಗೆ ಜಾಥಾದ ಮೂಲಕ ಆಗಮಿಸಿದ ನೂರಾರು ಕಾರ್ಯಕರ್ತರು, ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಜಮಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್‌ ಅಹಮದ್‌ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸ್ಮಶಾನ ಮತ್ತು ಮಸೀದಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಬಾರದೆಂದು ಕಾಯ್ದಿರಿಸಿಕೊಳ್ಳಲು ಜಾರಿಗೆ ಬಂದ ವಕ್ಫ್‌ ಮಂಡಳಿಯು, ಇಂದು  ರೈತರ ಭೂಮಿಗಳಿಗೆ ಬೇಲಿ ಹಾಕುವ ಕೆಲಸಕ್ಕೆ ಕೈಹಾಕಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ’ ಎಂದು ದೂರಿದರು.

ADVERTISEMENT

‘ರೈತರು ಹಾಗೂ ಹಿಂದೂಗಳ ಬಗ್ಗೆ ನಿಜವಾದ ಕಾಳಜಿಯಿದ್ದರೆ 1974ರ ವಕ್ಫ್‌ ಆಸ್ತಿ ಕುರಿತ ಗೆಜೆಟ್‌ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಶಾಸಕ ವಿಶ್ವನಾಥ್‌ ಮಾತನಾಡಿ, ‘ವಕ್ಫ್‌ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುವ ಕಾರ್ಯ ಬಹಳ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣರಾಗಿರುವ ಜಮೀರ್‌ ಅಹಮದ್‌ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಉಚ್ಚಾಟಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಸ್‌.ಮುನಿರಾಜು, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್‌ಗೌಡ, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್‌.ಎನ್‌.ರಾಜಣ್ಣ, ಎಚ್‌.ಬಿ.ಹನುಮಯ್ಯ, ಎಂ.ಸತೀಶ್‌ ಮತ್ತಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.