ಬೆಂಗಳೂರು: ‘ರಾಷ್ಟ್ರೀಯ ಸೈನಿಕರ ಸ್ಮಾರಕದ ಆಕರ್ಷಣೆಯಾದ ‘ವೀರಗಲ್ಲ’ನ್ನು ಈ ವರ್ಷದೊಳಗೆ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.
ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್‌ಮೆಂಟ್ ಟ್ರಸ್ಟ್ ವತಿಯಿಂದ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕಾರ್ಗಿಲ್ ವಿಜಯ ದಿವಸ’ ಆಚರಿಸಲಾಯಿತು.
550 ಟನ್ ತೂಕ ಮತ್ತು 78 ಅಡಿ ಎತ್ತರದ ಏಕಶಿಲೆಯ ವೀರಗಲ್ಲು ಸೈನಿಕರ ಸಾಹಸಗಾಥೆಯನ್ನು ಹೇಳುತ್ತದೆ. ಶಿಲ್ಪಿ ಅಶೋಕ ಗುಡಿಗಾರ ಅವರು ಈ ವೀರಗಲ್ಲಿನ ಕೆತ್ತನೆಯನ್ನು ದೇವನಹಳ್ಳಿಯ ಕೊಯಿರಾ ಕಲ್ಲು ಗಣಿ ಪ್ರದೇಶದಲ್ಲಿ ಮಾಡಲಾಗಿದೆ. ‘ವೀರಗಲ್ಲನ್ನು ಅಲ್ಲಿಂದ ಇಲ್ಲಿಗೆ ಸಾಗಿಸಲು ತಾಂತ್ರಿಕ ತೊಂದರೆಗಳಿರುವುದರಿಂದ ನಿಧಾನವಾಗುತ್ತಿದೆ’ ಎಂದು ಹೇಳಿದರು.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ‘ಶಿಲೆಯನ್ನು ಸಾಗಿಸಲು ಕಂಪನಿಗಳು ₹5 ಕೋಟಿ ಹಣವನ್ನು ಕೋರುತ್ತಿವೆ. ಅದಕ್ಕಾಗಿ ಸರ್ಕಾರವೂ ಹಣ ಮೀಸಲಿಟ್ಟಿದೆ. ಆದಷ್ಟು ಶೀಘ್ರವಾಗಿ ವೀರಗಲ್ಲನ್ನು ಸ್ಥಳಾಂತರಿಸುತ್ತೇವೆ’ ಎಂದು ತಿಳಿಸಿದರು.
‘ನಿವೃತ್ತಿ ಹೊಂದಿದ ಹಾಗೂ ಹುತಾತ್ಮ ಸೈನಿಕರ ಕುಟುಂಬಗಳ ಬೇಡಿಕೆಗಳ ಈಡೇರಿಸಲು ಸೈನಿಕ ಮಂಡಳಿ ಸ್ಥಾಪಿಸಲಾಗಿದೆ. ಅವುಗಳನ್ನು ಸಾಕಾರಗೊಳಿಸಲು ವಿವಿಧ ಕಾರಣಗಳಿಂದ ತಡವಾಗುತ್ತಿದೆ. ಇದನ್ನು ತಪ್ಪಿಸಲು ಬೇರೆ ಬೇರೆ ಕಾನೂನುಗಳ ಅಡಿ, ಮೂರು ತಿಂಗಳೊಳಗಾಗಿ ಅವರ ಬೇಡಿಕೆಗಳನ್ನು ಇತ್ಯರ್ಥಪಡಿಸಲು ಸೂಚನೆ ನೀಡಿದ್ದೇನೆ’ ಎಂದು ಮಾಹಿತಿ ನೀಡಿದರು.
‘ಕಾರ್ಗಿಲ್ ಯುದ್ಧದಲ್ಲಿ 527 ಸೈನಿಕರು ಹುತಾತ್ಮರಾದರು. ರಾಜ್ಯದ 16 ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲರ ತ್ಯಾಗ ನಮಗೆ ಸ್ಫೂರ್ತಿಯಾಗಬೇಕು’ ಎಂದರು.
ಭೂಸೇನೆ, ವಾಯುಪಡೆ, ನೌಕಾಪಡೆಗಳ ಹಿರಿಯ ಅಧಿಕಾರಿಗಳು,ಯೋಧರು, ನಿವೃತ್ತ ಸೇನಾಧಿಕಾರಿಗಳು, ಹುತಾತ್ಮ ಯೋಧರ ಕುಟುಂಬದ ಸದಸ್ಯರು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಕೆಡೆಟ್‌ಗಳು, ವಿದ್ಯಾರ್ಥಿಗಳುಸೈನಿಕ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ವಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.