ADVERTISEMENT

ತ್ಯಾಜ್ಯ: ಹೋರಾಟಕ್ಕೆ ಗುತ್ತಿಗೆದಾರರ ನಿರ್ಧಾರ

89 ಪ್ಯಾಕೇಜ್‌ಗಳಿಗೆ ಕೂಡಲೇ ಕಾರ್ಯಾದೇಶ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 16:12 IST
Last Updated 5 ಆಗಸ್ಟ್ 2024, 16:12 IST
ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘದ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು
ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘದ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು   

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಗೆ ಹೊಸದಾಗಿ ಯೋಜಿಸಲಾಗಿರುವ 89 ಪ್ಯಾಕೇಜ್‌ಗಳಿಗೆ ಶೀಘ್ರ ಕಾರ್ಯಾದೇಶ ನೀಡದಿದ್ದರೆ ಹೋರಾಟ ನಡೆಸಲು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘ ನಿರ್ಧರಿಸಿದೆ.

ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಮತ್ತೊಮ್ಮ ಮನವಿ ಸಲ್ಲಿಸಿ, ನಂತರ ಹೋರಾಟದ ಕಾರ್ಯಸೂಚಿ ರೂಪಿಸಲು ಸೋಮವಾರ ನಡೆದ ಸಂಘದ ಸಭೆಯಲ್ಲಿ ಸದಸ್ಯರು ತೀರ್ಮಾನಿಸಿದ್ದಾರೆ.

‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್‌ (ಬಿಎಸ್‌ಡಬ್ಲ್ಯುಎಂಎಲ್‌) ಘನತ್ಯಾಜ್ಯ ನಿರ್ವಹಣೆಗಾಗಿ 89 ಪ್ಯಾಕೇಜ್‌ಗಳ ಟೆಂಡರ್‌ ಅನ್ನು 2022ರಲ್ಲಿ ಕರೆದಿದೆ. ಹೈಕೋರ್ಟ್‌ನಲ್ಲಿ ಈ ಪ್ಯಾಕೇಜ್‌ಗಳು ಅತ್ಯುತ್ತಮವಾಗಿವೆ ಎಂದು ಹೇಳಿಕೊಂಡಿದೆ. ಆದರೆ, ಎಲ್ಲ ರೀತಿಯ ಪ್ರಕ್ರಿಯೆ ಮುಗಿದಿದ್ದರೂ ಕಾರ್ಯಾದೇಶ ನೀಡುತ್ತಿಲ್ಲ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ತಿಳಿಸಿದರು.

ADVERTISEMENT

‘ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸುಮಾರು ₹561 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ದರ ನಿಗದಿಯಾಗಿದ್ದಾಗ ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹66 ಇತ್ತು. ಇಂದು ಲೀಟರ್‌ಗೆ ₹89 ಆಗಿದೆ. ಕಾರ್ಯಾಚರಣೆ ವೆಚ್ಚವೆಲ್ಲವೂ ಹೆಚ್ಚಾಗಿವೆ. ದರ ಹೆಚ್ಚಿಸಲು ಕೇಳಿದರೆ, ‘ಹೊಸ ಪ್ಯಾಕೇಜ್‌ಗಳಾಗುತ್ತಿದೆ. ಅದರಲ್ಲಿ ಎಲ್ಲ ಸರಿಹೋಗುತ್ತದೆ’ ಎಂದಿದ್ದರು. ಆದರೆ, ಎರಡು ವರ್ಷದಿಂದ ಪ್ಯಾಕೇಜ್‌ಗಳ ಅನುಷ್ಠಾನವನ್ನು ಮುಂದೂಡುತ್ತಲೇ ಬರುತ್ತಿದ್ದಾರೆ’ ಎಂದು ಆರೋಪಿಸಿದರು.

‘89 ಪ್ಯಾಕೇಜ್‌ಗಳ ಬದಲು ‘ಸಮಗ್ರ ಘನತ್ಯಾಜ್ಯ ನಿರ್ವಹಣೆ’ ಎಂಬ ಯೋಜನೆ ಆರಂಭಿಸಲು ಮುಂದಾಗಿದ್ದಾರೆ. ಇದರಿಂದ ಪಾಲಿಕೆಗೆ ಪ್ರತಿ ತಿಂಗಳೂ ನೂರಾರು ಕೋಟಿ ರೂಪಾಯಿ ಹೆಚ್ಚಿನ ಹೊರೆ ಬೀಳುತ್ತದೆ. 89 ಪ್ಯಾಕೇಜ್‌ಗಳನ್ನು ಅನುಷ್ಠಾನಗೊಳಿಸಿದರೆ, ಆರ್ಥಿಕ ಹೊರೆಯಾಗುವುದಿಲ್ಲ. ಆದರೆ, ಪಾಲಿಕೆಯ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಸರ್ಕಾರದ ಮಧ್ಯೆ ಕಂದಕ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಮುಖ್ಯ ಆಯುಕ್ತರು ಶೀಘ್ರವಾಗಿ ಸ್ಪಂದಿಸದಿದ್ದರೆ, ಘನತ್ಯಾಜ್ಯ ಸಾಗಣೆ ಗುತ್ತಿಗೆದಾರರು ಹೋರಾಟ ಹಾದಿ ಹಿಡಿಯಬೇಕಾಗುತ್ತದೆ’ ಎಂದು ಬಾಲಸುಬ್ರಮಣಿಯಂ ಎಚ್ಚರಿಸಿದರು.

ಸಂತ್ರಸ್ತರ ಪರಿಹಾರಕ್ಕೆ ₹55 ಲಕ್ಷ ದೇಣಿಗೆ
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಪರಿಹಾರ ನೀಡಲು ಸುಮಾರು ₹55 ಲಕ್ಷ ದೇಣಿಗೆ ನೀಡಲು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ ಸಂಸ್ಕರಣೆ ಘಟಕಕ್ಕೆ ಸಾಗಣೆ ಮಾಡುತ್ತಿರುವ ಗುತ್ತಿಗೆದಾರರ ಜೂನ್‌ ತಿಂಗಳ ಬಿಲ್ಲಿನಲ್ಲಿ ಶೇ 1ರಷ್ಟು ಮೊತ್ತವನ್ನು ಮೂಲದಲ್ಲೇ ಕಟಾವು ಮಾಡಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ಮೊತ್ತವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ತಲುಪಿಸಿ ಆ ಮೂಲಕ ಸಂತ್ರಸ್ತರಿಗೆ ನೆರವಾಗಲು ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.