ADVERTISEMENT

ವೃಷಭಾವತಿ ಪುನರುಜ್ಜೀವನಕ್ಕೆ ಕ್ರಮ: ಜಲಮಂಡಳಿ ಪ್ರಮಾಣ ಪತ್ರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:04 IST
Last Updated 27 ಆಗಸ್ಟ್ 2021, 1:04 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ವೃಷಭಾವತಿ ನದಿಯ ಪುನರುಜ್ಜೀವನಕ್ಕೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಅಧ್ಯಯನ ಸಂಸ್ಥೆ (ನೀರಿ) ಸಲ್ಲಿಸಿರುವ ವರದಿ ಆಧರಿಸಿ ಅಲ್ಪಾವಧಿ ಮತ್ತು ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಜಲಮಂಡಳಿ ಪ್ರಮಾಣ ಪತ್ರ ಸಲ್ಲಿಸಿದೆ.‌‌

‘ನಾಯಂಡಹಳ್ಳಿ ಬಳಿ ಹೊಸದಾಗಿ ಕೊಳಚೆ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ) ತೆರೆಯಲಾಗುತ್ತಿದೆ. ಸದ್ಯ ಒಟ್ಟು 15 ಕೋಟಿ ಲೀಟರ್‌ ಶುದ್ಧೀಕರಣ ಸಾಮರ್ಥ್ಯವಿದ್ದು, ಮುಂದಿನ ಮಾರ್ಚ್ ವೇಳೆಗೆ 5.31 ಕೋಟಿ ಲೀಟರ್‌ಗೆ ಹೆಚ್ಚಳವಾಗಲಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ತ್ಯಾಜ್ಯ ನೀರು ನಿರ್ವಹಣೆ) ಬಿ.ಸಿ. ಗಂಗಾಧರ ಅವರು ಪ್ರಮಾಣಪತ್ರ ತಿಳಿಸಿದ್ದಾರೆ.

76 ಕಿಲೋ ಮೀಟರ್‌ನಲ್ಲಿ ಚರಂಡಿಗಳ ಸರ್ವೆ ಪೂರ್ಣಗೊಂಡಿದೆ. ಕೊಳಚೆ ನೀರು ರಾಜಕಾಲುವೆ ಸೇರುತ್ತಿರುವ 1,780 ಸ್ಥಳಗಳನ್ನು ಗುರುತಿಸಲಾಗಿದೆ. ಮಾರ್ಚ್ ವೇಳೆಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು. ಇನ್ನುಳಿದ 224 ಕಿಲೋ ಮೀಟರ್‌ ಸರ್ವೆ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದ್ದಾರೆ.

ADVERTISEMENT

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಒಳಪಟ್ಟಿರುವ 110 ಹಳ್ಳಿಗಳಲ್ಲಿ ಎಸ್‌ಟಿಪಿ ಸೇರಿ ಒಳಚರಂಡಿ ಕಾಮಗಾರಿಯನ್ನು₹700 ಕೋಟಿ ಮೊತ್ತದಲ್ಲಿ ನಿರ್ವಹಿಸಲಾಗುತ್ತಿದೆ. 2024ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ಹಸಿರು ನ್ಯಾಯಪೀಠದ (ಎನ್‌ಜಿಟಿ) ಮಾರ್ಗಸೂಚಿ ಪಾಲಿಸಬೇಕಾಗಿರುವುದರಿಂದ ಎಲ್ಲ ಎಸ್‌ಟಿಪಿಗಳನ್ನು ₹500 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲರಾದ ಗೀತಾ ಮಿಶ್ರಾ, ‘ವೃಷಭಾವತಿ ನದಿ ಮಲಿನಗೊಳ್ಳುವುದನ್ನು ತಪ್ಪಿಸಿ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು’ ಎಂದು ಕೋರಿದ್ದರು.‌

ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಬಿಬಿಎಂಪಿ ಮತ್ತು ಕೆಎಸ್‌ಪಿಸಿಬಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಯನ್ನು ಅ.21ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.