ADVERTISEMENT

ಮಳೆ ಬರುತ್ತಿದೆ, ನಾಳೆ ಕೆಲಸ ಮುಗಿಸುತ್ತೇವೆಂದರೂ ಕೇಳಲಿಲ್ಲ...

ಕಣ್ಮುಂದೆ ಪೈಪ್‌ನಲ್ಲಿ ಸಿಲುಕಿ ಮೃತರಾದ ಕಾರ್ಮಿಕರ ಸ್ನೇಹಿತರ ಅಳಲು

​ಪ್ರಜಾವಾಣಿ ವಾರ್ತೆ
Published 19 ಮೇ 2022, 7:46 IST
Last Updated 19 ಮೇ 2022, 7:46 IST
ಕಾರ್ಮಿಕರು ಮೃತಪಟ್ಟ ಸ್ಥಳ–ಪ್ರಜಾವಾಣಿ ಚಿತ್ರ
ಕಾರ್ಮಿಕರು ಮೃತಪಟ್ಟ ಸ್ಥಳ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಡನಾಡಿಗಳಿಬ್ಬರು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಈಗಲೂ ಕಣ್ಣೆದುರು ಸುಳಿಯುತ್ತಿದೆ. ಅದು ಮನಸ್ಸನ್ನು ಘಾಸಿಗೊಳಿಸುತ್ತಿದೆ. ಅವರನ್ನು ಬದುಕಿಸಲು ಆಗಲಿಲ್ಲವಲ್ಲ ಎಂಬ ಕೊರಗು ವಿಪರೀತ ಕಾಡುತ್ತಿದೆ...’

ನೀರು ಸರಬರಾಜು ಮಾಡಲು ಅಳವಡಿಸಲಾಗುತ್ತಿದ್ದ ಕಬ್ಬಿಣದ ಪೈಪ್‌ಗಳಲ್ಲಿ ಸಿಲುಕಿ ಮೃತಪಟ್ಟದೇವ್‌ಭರತ್‌ ಹಾಗೂ ಅಂಕಿತ್‌ಕುಮಾರ್‌ ಅವರ ಜೊತೆ ಕೆಲಸ ಮಾಡುತ್ತಿದ್ದ ತ್ರಿಲೋಕಿ ಅವರ ಭಾವುಕ ಮಾತಿದು.

‘ದೇವ್‌ಭರತ್‌ ಮತ್ತು ಅಂಕಿತ್‌ ‘ಮ್ಯಾನ್‌ಹೋಲ್‌’ ಮೂಲಕ ಪೈಪ್‌ನೊಳಗೆ ಇಳಿದು ವೆಲ್ಡಿಂಗ್‌ ಮಾಡುತ್ತಿ
ದ್ದರು. ಸಂಜೆಯಿಂದ ಜಿಟಿ ಜಿಟಿ ಮಳೆಯಾಗುತ್ತಿತ್ತು. ರಾತ್ರಿ 7 ಗಂಟೆ ಸುಮಾರಿಗೆ ಮಳೆ ಜೋರಾಗಿ ರಸ್ತೆಯ ಮೇಲಿನಿಂದ ನೀರು ನುಗ್ಗಿ ಬಂದು ಪೈಪ್‌ನೊಳಗೆ ಶೇಖರಣೆಯಾಯಿತು. ಅದನ್ನು ಕಂಡು ಗಾಬರಿಯಾದೆ. ಮೇಲೆ ಬರುವಂತೆ ಕೂಗಿದೆ. ಅದು ಅವರಿಗೆ ಕೇಳಿಸಲೇ ಇಲ್ಲ. ‘ಮ್ಯಾನ್‌ಹೋಲ್‌’ ಕಿರಿದಾಗಿತ್ತು. ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಹಾಗೆ ಪ್ರವಾಹ ಹೆಚ್ಚಾಯಿತು. ಮಳೆ ನೀರಿನಿಂದ ಗುಂಡಿ ಹಾಗೂ ಪೈಪ್‌ ತುಂಬಿ ಹೋಯಿತು’ ಎಂದು ತಿಳಿಸಿದರು.

ADVERTISEMENT

‘ನಾವೆಲ್ಲಾ ಕಡಬಗೆರೆಯಲ್ಲಿ ವಾಸವಿದ್ದೆವು. ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6ಗಂಟೆವರೆಗೂ ಕೆಲಸ ಮಾಡುತ್ತಿದ್ದೆವು. ಎಂದಿನಂತೆ ಮಂಗಳವಾರ ಒಟ್ಟು 9 ಮಂದಿ ಕೆಲಸಕ್ಕೆ ಹೋಗಿದ್ದೆವು. ಮಳೆ ಬರುತ್ತಿದ್ದರಿಂದ ಬೇಗನೆ ಮನೆಗೆ ಹೋಗುವ ಆಲೋಚನೆ ಇತ್ತು. ಆದರೂ 6 ಗಂಟೆವರೆಗೂ ಕೆಲಸ ಮಾಡಿದೆವು. ಮನೆಗೆ ಹೊರಡುವ ವೇಳೆ ಸ್ಥಳಕ್ಕೆ ಬಂದ ಎಂ.ಇ.ಐ.ಎಲ್‌.ಕಂಪನಿಯ ನಾಲ್ವರು ಸಿಬ್ಬಂದಿ ರಾತ್ರಿ 9 ಗಂಟೆವರೆಗೂ ಇದ್ದು, ವೆಲ್ಡಿಂಗ್‌ ಕೆಲಸ ಮುಗಿಸಿ ಹೋಗುವಂತೆದೇವ್‌ಭರತ್‌, ಅಂಕಿತ್‌ ಹಾಗೂ ನನಗೆ ಸೂಚಿಸಿದರು. ಮಳೆ ಬರುತ್ತಿದೆ, ನಾಳೆ ಬಂದು ಕೆಲಸ ಮುಗಿಸುತ್ತೇವೆ ಎಂದು ಮನವಿ ಮಾಡಿದರೂ ಕೇಳಲಿಲ್ಲ. ನಮ್ಮ ಮನವಿಗೆ ಅವರು ಒಪ್ಪಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತು’ ಎಂದು ಗದ್ಗದಿತರಾದರು.

‘ಪೈಪ್‌ನೊಳಗೆ ಇಳಿಯಲು ಏಣಿಯ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಎರಡು ಅಡಿಯಷ್ಟು ಅಗಲದ ‘ಮ್ಯಾನ್‌ ಹೋಲ್‌’ ಮೂಲಕವೇ ಇಬ್ಬರೂ ಒಳಗೆ ಹೋದರು. ಏಣಿಯನ್ನಾದರೂ ತಂದುಕೊಟ್ಟಿದ್ದರೆ ಅವರು ಬದುಕಿಬಿಡುತ್ತಿದ್ದರೇನೊ. ಅವರು ಮೃತಪಟ್ಟ ವಿಷಯವನ್ನು ರಾತ್ರಿಯೇ ಸಿಬ್ಬಂದಿಯ ಗಮನಕ್ಕೆ ತಂದೆ. ಹೀಗಿದ್ದರೂ ಯಾರೊಬ್ಬರೂ ಅತ್ತ ಸುಳಿಯಲಿಲ್ಲ. ಬುಧವಾರ ಬೆಳಿಗ್ಗೆಯವರೆಗೂ ಮೃತದೇಹಗಳು ಪೈಪ್‌ನೊಳಗೆ ಇದ್ದವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.