ADVERTISEMENT

ಬೆಂಗಳೂರು: ಆಸ್ಪತ್ರೆಗಳಲ್ಲೂ ಶುದ್ಧ ನೀರು ವ್ಯತ್ಯಯ; ರೋಗಿಗಳ ಕುಟುಂಬಸ್ಥರ ಪರದಾಟ

ಟ್ಯಾಂಕರ್ ನೀರು ಅವಲಂಬಿಸಿದ ಖಾಸಗಿ ಆಸ್ಪತ್ರೆಗಳು

ವರುಣ ಹೆಗಡೆ
Published 9 ಮಾರ್ಚ್ 2024, 23:16 IST
Last Updated 9 ಮಾರ್ಚ್ 2024, 23:16 IST
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಗಳ ಸಮುಚ್ಚಯದಲ್ಲಿ ಇರುವ ಶುದ್ಧ ನೀರಿನ ಘಟಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಯ ಕುಟುಂಬಸ್ಥರೊಬ್ಬರು ನೀರನ್ನು ಹಿಡಿಯುತ್ತಿರುವುದು -ಪ್ರಜಾವಾಣಿ ಚಿತ್ರಗಳು/ರಂಜು ಪಿ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಗಳ ಸಮುಚ್ಚಯದಲ್ಲಿ ಇರುವ ಶುದ್ಧ ನೀರಿನ ಘಟಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಯ ಕುಟುಂಬಸ್ಥರೊಬ್ಬರು ನೀರನ್ನು ಹಿಡಿಯುತ್ತಿರುವುದು -ಪ್ರಜಾವಾಣಿ ಚಿತ್ರಗಳು/ರಂಜು ಪಿ.   

ಬೆಂಗಳೂರು: ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗಿರುವುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚು ನೀರನ್ನು ಆಗಾಗ ಸೇವಿಸಬೇಕೆಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ನಗರದ ಪ್ರಮುಖ ಆಸ್ಪತ್ರೆಗಳ ಕೊಳವೆ ಬಾವಿಯ ನೀರಿನಲ್ಲಿ ವ್ಯತ್ಯಾಸ ಆಗುತ್ತಿರುವುದರಿಂದ ಶುದ್ಧ ಕುಡಿಯುವ ನೀರಿನ ವ್ಯತ್ಯಯವಾಗಿದೆ. 

ಬಿಸಿಲಿನ ತೀವ್ರತೆ, ದೂಳು, ಶುಷ್ಕ ವಾತಾವರಣದಿಂದ ನಗರದ ಜನರಲ್ಲಿ ಗಂಟಲು ಬೇನೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆ ಎದುರಿಸುತ್ತಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಆದರೆ. ಇದೇ ವೇಳೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸದ್ಯ ನೀರು ಲಭ್ಯವಾಗುತ್ತಿದ್ದರೂ ಅವರ ಜತೆಗಿರುವ ಕುಟುಂಬಸ್ಥರು ಹಾಗೂ ಸಂಬಂಧಿಗಳಿಗೆ ಆಸ್ಪತ್ರೆಗಳ ಒಳಗಡೆ ನೀರು ಪಡೆಯಲು ಬಿಡುತ್ತಿಲ್ಲ. ಇದರಿಂದಾಗಿ ಅವರು ಸಾರ್ವಜನಿಕ ಶುದ್ಧ ನೀರಿನ ಘಟಕಗಳು ಹಾಗೂ ಹೋಟೆಲ್‌ಗಳನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ ರೋಗಿಗಳ ಕಡೆಯವರು ಹಣ ನೀಡಿ ಕುಡಿಯಲು ನೀರು ಪಡೆಯಬೇಕಾಗಿದೆ. 

ನಗರದ ಕೆ.ಆರ್. ಮಾರುಕಟ್ಟೆ ಬಳಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ, ಟ್ರಾಮಾ ಕೇರ್ ಕೇಂದ್ರ, ನೆಫ್ರೊ–ಯೂರಾಲಜಿ ಸಂಸ್ಥೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆ ಹಾಗೂ ಇನ್‌ಸ್ಟಿಟ್ಯೂಟ್‌ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್‌ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳ ಸಂಕೀರ್ಣದಲ್ಲಿ ಚಿಕಿತ್ಸೆ ಪಡೆಯಲು ಪ್ರತಿನಿತ್ಯ 2.5 ಸಾವಿರಕ್ಕೂ ಅಧಿಕ ರೋಗಿಗಳು ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ಅವರ ಕುಟುಂಬಸ್ಥರು ಹಾಗೂ ಸಂಬಂಧಿಗಳು ಆಸ್ಪತ್ರೆಗಳ ಸಂಕೀರ್ಣದ ಆವರಣದಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಶಾಸಕರ ಅನುದಾನದಡಿ ನಿರ್ಮಿಸಲಾಗಿರುವ ಶುದ್ಧ ನೀರಿನ ಘಟಕವೇ ಅವರ ಬಾಯಾರಿಕೆ ನೀಗಿಸುತ್ತಿದೆ. ಅಲ್ಲಿ ₹ 2 ನಾಣ್ಯ ಹಾಕಿ 2 ಲೀಟರ್ ನೀರು ಪಡೆಯಬಹುದಾಗಿದೆ. 

ADVERTISEMENT

ಟ್ಯಾಂಕರ್ ನೀರು ಅವಲಂಬನೆ: ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಟ್ಯಾಂಕರ್‌ ನೀರನ್ನೇ ಅವಲಂಬಿಸಿವೆ. ಬನ್ನೇರುಘಟ್ಟ, ಎಚ್‌ಎಸ್‌ಆರ್ ಲೇಔಟ್‌, ಯಲಹಂಕ, ಇಂದಿರಾನಗರ, ವೈಟ್‌ಫೀಲ್ಡ್, ಬಿಟಿಎಂ ಲೇಔಟ್‌, ಮಹದೇವಪುರ, ಕೆ.ಆರ್. ಪುರ ಸೇರಿದಂತೆ ವಿವಿಧೆಡೆ ನೀರಿನ ಸಮಸ್ಯೆ ಸ್ಥಳೀಯ ನಿವಾಸಿಗಳ ಜತೆಗೆ ಆಸ್ಪತ್ರೆಗಳಿಗೂ ತಟ್ಟಿದೆ. ಶಸ್ತ್ರಚಿಕಿತ್ಸೆ, ಡಯಾಲಿಸಿಸ್ ಸೇರಿ ವಿವಿಧ ಸಂದರ್ಭದಲ್ಲಿ ಶುದ್ಧ ನೀರು ಬಳಕೆ ಅನಿವಾರ್ಯವಾಗಿರುವುದರಿಂದ ಆಸ್ಪತ್ರೆಗಳು ದುಪ್ಪಟ್ಟು ಹಣ ನೀಡಿ ಟ್ಯಾಂಕರ್ ನೀರನ್ನು ಹಾಕಿಸಿಕೊಳ್ಳುತ್ತಿವೆ. 

ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಮಲ್ಲೇಶ್ವರದಲ್ಲಿ ಇರುವ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಸೇರಿ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಕೊಳವೆ ಬಾವಿಗಳನ್ನೂ ಹೊಂದಿವೆ. ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದೆ.    

‘ಸದ್ಯ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಕೊಳವೆ ಬಾವಿ ಇರುವುದರಿಂದ ಅದರ ನೀರನ್ನೂ ಬಳಸಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಳವೆ ಬಾವಿ ನೀರು ಕಡಿಮೆಯಾಗಿ, ಸಮಸ್ಯೆಯಾಗುವ ಸಾಧ್ಯತೆಯಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯ ಎದುರು ರೋಗಿಗಳ ಕುಟುಂಬಸ್ಥರು ಶುದ್ಧ ನೀರಿನ ಕ್ಯಾನ್ ಖರೀದಿಸಿ ಇಟ್ಟುಕೊಂಡಿರುವುದು 
ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್‌ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಕುಟುಂಬಸ್ಥರು ಮನೆಯಿಂದಲೇ ನೀರನ್ನು ತಂದು ಕಾಯುತ್ತಿರುವುದು
ಕೊಳವೆ ಬಾವಿಯಲ್ಲಿ ಸದ್ಯ ಅಗತ್ಯ ಪ್ರಮಾಣದಲ್ಲಿ ನೀರಿದೆ. ಆ ನೀರನ್ನು ಶುದ್ಧೀಕರಿಸಿ ಒಂದು ರೂಪಾಯಿಗೆ ಒಂದು ಲೀಟರ್ ನೀರನ್ನು ಒದಗಿಸುತ್ತಿದ್ದೇವೆ
ವೆಂಕಟಪ್ಪ ಬೌರಿಂಗ್ ಆಸ್ಪತ್ರೆಯಲ್ಲಿರುವ ಶುದ್ಧ ನೀರು ಘಟಕದ ನಿರ್ವಾಹಕ
ಆಸ್ಪತ್ರೆಗಳಲ್ಲಿ ರೋಗಿಗಳ ಕುಟುಂಬಸ್ಥರನ್ನು ಒಳಗಡೆ ಬಿಟ್ಟುಕೊಳ್ಳುತ್ತಿಲ್ಲ. ಇದರಿಂದ ಹೊರಗಡೆ ಕಾಯುವ ನಮಗೆ ನೀರಿನ ಸಮಸ್ಯೆ ಕಾಡುತ್ತಿದೆ
ರೀಟಾ ಶಿವಾಜಿನಗರ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗಿಂತ ಅವರ ಜತೆಗೆ ಬಂದವರಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೋಟೆಲ್ ಸೇರಿ ವಿವಿಧೆಡೆ ಹಣ ನೀಡಿ ನೀರು ತರಬೇಕಾಗಿದೆ
ಮಾಲಾ ಬೆಳಗಾವಿ

‘ನೀರು ಪೂರೈಕೆಯಲ್ಲಿ ವ್ಯತ್ಯಯ’

‘ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳು ಟ್ಯಾಂಕರ್‌ ನೀರನ್ನೇ ಹಾಕಿಸಿಕೊಳ್ಳುತ್ತಿವೆ. ಈಗ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇಷ್ಟಾಗಿಯೂ ಆಸ್ಪತ್ರೆಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿವೆ. ಸಮಸ್ಯೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಗೋವಿಂದಯ್ಯ ಯತೀಶ್ ತಿಳಿಸಿದರು. ‘ಇತ್ತೀಚಿನ ದಿನಗಳಲ್ಲಿ ಟ್ಯಾಂಕರ್ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ನೀರಿನ ದರವನ್ನು ಟ್ಯಾಂಕರ್‌ಗಳ ಮಾಲೀಕರು ಹೆಚ್ಚಳ ಮಾಡಿದ್ದರು. ಅದಕ್ಕೆ ಒಪ್ಪಿಕೊಂಡಿದ್ದೆವು. ಆದರೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿಗಳು ಬರಿದಾಗುತ್ತಿರುವುದರಿಂದ ದಿಕ್ಕು ಕಾಣದಂತಾಗಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಅನ್ನುವುದು ತಿಳಿಯುತ್ತಿಲ್ಲ. ಸರ್ಕಾರವೇ ಏನಾದರೂ ಮಾಡಬೇಕು’ ಎಂದು ಸುಗುಣ ಆಸ್ಪತ್ರೆ ಮುಖ್ಯಸ್ಥ ಡಾ. ರವೀಂದ್ರ ಆರ್. ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.