ADVERTISEMENT

ಬೆಂಗಳೂರಿನ ಕೆರೆಗಳ ನೀರಿನ ಗುಣಮಟ್ಟ ಅತಿ ಕಳಪೆ: ರಾಜ್ಯ ಸರ್ಕಾರಕ್ಕೆ NGT ಚಾಟಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:39 IST
Last Updated 19 ಅಕ್ಟೋಬರ್ 2024, 0:39 IST
ಎನ್‌ಜಿಟಿ
ಎನ್‌ಜಿಟಿ   

ನವದೆಹಲಿ: ಬೆಂಗಳೂರಿನ ಕೆರೆಗಳ ನೀರಿನ ಗುಣಮಟ್ಟ ಅತಿ ಕಳಪೆಯಾಗಿದೆ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಚಾಟಿ ಬೀಸಿದೆ. 

ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ, ಅರುಣ್‌ ಕುಮಾರ್ ತ್ಯಾಗಿ ಹಾಗೂ ಡಾ.ಎ.ಸೆಂಥಿಲ್‌ವೆಲ್ ಅವರನ್ನು ಒಳಗೊಂಡ ಪೀಠವು ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ಬಿಬಿಎಂಪಿ, ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಪೀಠ ನೋಟಿಸ್‌ ನೀಡಿದೆ. 

ADVERTISEMENT

ಬೆಂಗಳೂರಿನ 15 ಕೆರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಿದ ಬಳಿಕವೂ ನೀರಿನ ಗುಣಮಟ್ಟ ಸುಧಾರಣೆ ಆಗಿಲ್ಲ. ಕಳೆದ 31 ತಿಂಗಳಲ್ಲಿ 12 ಕೆರೆಗಳ ನೀರಿನ ಗುಣಮಟ್ಟ ಕಳಪೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ, 9 ಜಲಕಾಯಗಳ ನೀರಿನ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಉತ್ತರಹಳ್ಳಿ ಕೆರೆಯ ನೀರನ್ನು 16 ಸಲ ಪರಿಶೀಲನೆ ನಡೆಸಲಾಗಿದೆ. ಎಲ್ಲ ವರದಿಯಲ್ಲೂ ನೀರಿನ ಗುಣಮಟ್ಟ ಅತ್ಯಂತ ಕಳಪೆ ಎಂದು ಬಂದಿದೆ. ಅನೇಕ ಜಲಮೂಲಗಳು ಜೈವಿಕ ವ್ಯವಸ್ಥೆಯ ಕುಸಿತದಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಎಸ್‌ಟಿಪಿಗಳು ಕಾರ್ಯನಿರ್ವಹಿಸದೆ ಇರುವುದಕ್ಕೆ ಈ ವರದಿ ಸಾಕ್ಷಿ. ರಾಜ್ಯ ಸರ್ಕಾರದ ಲೋಪ ಎದ್ದು ಕಾಣುತ್ತಿದೆ‘ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಈ ‍‌ಪ್ರಕರಣದಲ್ಲಿ ನೀರಿನ ಸಂರಕ್ಷಣಾ ಕಾಯ್ದೆ 1974, ಜೌಗು ಪ್ರದೇಶ ಸಂರಕ್ಷಣಾ ನಿಯಮ 2017 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.

ಬೆಂಗಳೂರು ಹೊರವಲಯದ ದೊಡ್ಡಕಲ್ಲಸಂದ್ರ ಕೆರೆ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.