ADVERTISEMENT

ಜಲಸಂಪನ್ಮೂಲ ಇಲಾಖೆ : 400 ಎಂಜಿನಿಯರ್‌ಗಳ ನೇರ ನೇಮಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 18:49 IST
Last Updated 3 ಫೆಬ್ರುವರಿ 2023, 18:49 IST

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 400 ಎಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಮೆರಿಟ್ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ರಾಜ್ಯದಲ್ಲಿ ಬೃಹತ್ ನೀರಾವರಿ ಯೋಜನೆಗಳು ಹಲವು ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿವೆ. ಎಂಜಿನಿಯರ್‌ಗಳ ಅವಶ್ಯ ಇದೆ. ಇಲಾಖೆಯಲ್ಲಿ ಒಂದು ಸಾವಿರ ಎಂಜಿನಿಯರ್‌ ಹುದ್ದೆಗಳು ಖಾಲಿ ಇದ್ದು, 500 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. 100 ಸಹಾಯಕ ಎಂಜಿನಿಯರ್‌ಗಳು, 300 ಕಿರಿಯ ಎಂಜಿನಿಯರ್‌ಗಳ ಭರ್ತಿಗೆ ಅನುಮೋದನೆ ದೊರೆತಿದೆ. ತ್ವರಿತ ನೇಮಕದ ಕಾರಣಕ್ಕೆ ಕೆಪಿಎಸ್‌ಸಿ ಅಥವಾ ಯಾವುದೇ ನೇಮಕಾತಿ ಪ್ರಾಧಿಕಾರಕ್ಕೆ ನೀಡದೆ, ಇಲಾಖೆಯಿಂದಲೇ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕೇಂದ್ರ ಸರ್ಕಾರ 2023–24ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಮೇಲ್ಡಡೆ ಯೋಜನೆಗೆ ₹ 5,300 ಕೋಟಿ ನೀಡಿದೆ. ಇದರಿಂದ ಯೋಜನೆಯ ತ್ವರಿತ ಕಾರ್ಯಗಳಿಗೆ ಅನುಕೂಲವಾಗಿದೆ. ಯೋಜನೆಯ ಒಟ್ಟು ವೆಚ್ಚ ₹ 23 ಸಾವಿರ ಕೋಟಿಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ₹ 13 ಸಾವಿರ ಕೋಟಿ ಖರ್ಚು ಮಾಡಿದೆ. ಕೇಂದ್ರ ನೀಡಿದ ಹಣ ಬಳಸಿಕೊಳ್ಳುವ ಜತೆಗೆ, ಉಳಿದ ಹಣ ನೀಡಲು ಮತ್ತೆ ಕೋರಿಕೆ ಸಲ್ಲಿಸಲಾಗುವುದು. ವರ್ಷದ ಒಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ಸರ್ಕಾರದಲ್ಲಿ ಖಾಲಿ ಇದ್ದ ಶೇ 90ರಷ್ಟು ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಮೆರಿಟ್‌ ಆಧಾರದಲ್ಲೇ ನೇರ ನೇಮಕ ಪ್ರಕ್ರಿಯೆಗಳು ನಡೆದಿವೆ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.