ADVERTISEMENT

ನೀರಿಗೆ ತತ್ವಾರ, ರೈತರಿಗೂ ಕಷ್ಟದ ಮಹಾಪೂರ

ನೆಲಮಂಗಲ ತಾಲ್ಲೂಕಿನಲ್ಲಿ ಕುಡಿಯಲು ನೀರಿಲ್ಲ, ಕೃಷಿಗೆ ಕೊಳವೆಬಾವಿ ನೀರೂ ಸಿಗುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 18:30 IST
Last Updated 6 ಫೆಬ್ರುವರಿ 2024, 18:30 IST
ನೆಲಮಂಗಲ ಪಟ್ಟಣದಲ್ಲಿ ನಗರಸಭೆ ವತಿಯಿಂದ ಹೊಸ ಕೊಳವೆಬಾವಿ ಕೊರೆಸಲಾಯಿತು
ನೆಲಮಂಗಲ ಪಟ್ಟಣದಲ್ಲಿ ನಗರಸಭೆ ವತಿಯಿಂದ ಹೊಸ ಕೊಳವೆಬಾವಿ ಕೊರೆಸಲಾಯಿತು   

ನೆಲಮಂಗಲ: ತಾಲ್ಲೂಕಿನಾದ್ಯಂತ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಕೊಳವೆಬಾವಿ ಮತ್ತು ಟ್ಯಾಂಕರ್‌ ನೀರಿನ ಮೇಲೆ ಜನರು ಅವಲಂಬಿತರಾಗಿದ್ದಾರೆ. ಕೃಷಿಗೂ ನೀರಿನ ಕೊರತೆ ಎದುರಾಗಿ, ಹಲವು ರೈತರು ಅನಿವಾರ್ಯವಾಗಿ ಫ್ಯಾಕ್ಟರಿಯ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ.

ನೆಲಮಂಗಲ ಪಟ್ಟಣಕ್ಕೆ ಮಂಚನಬೆಲೆ, ತಿಪ್ಪಗೊಂಡನಹಳ್ಳಿ, ಎತ್ತಿನಹೊಳೆಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ, ವಿಧಾನಸಭಾ ಕ್ಷೇತ್ರಕ್ಕೆ ಹೇಮಾವತಿಯಿಂದ ಕೆರೆ ತುಂಬಿಸುವ ಆಲೋಚನೆಗಳೆಲ್ಲ ಇನ್ನೂ ಕನಸಿನ ಮಾತಾಗಿದೆ. ಚುನಾವಣೆ ಸಂದರ್ಭದಲ್ಲಿ ಈ ಎಲ್ಲ ಯೋಜನೆಗಳು ಭಾಷಣಗಳಲ್ಲಿ ಹರಿದಾಡಿ ತಣ್ಣಗಾಗುತ್ತಿವೆ.

ನೆಲಮಂಗಲ ಪಟ್ಟಣದಲ್ಲಿ 5,700 ಮನೆಗಳಿದ್ದು, 25 ಸಾವಿರ ಜನಸಂಖ್ಯೆ ಹೊಂದಿದೆ. 31 ವಾರ್ಡ್‌ಗಳಲ್ಲಿ ಒಟ್ಟು 319 ಕೊಳವೆಬಾವಿಗಳಿವೆ. ಅವುಗಳಲ್ಲಿ 34 ದುರಸ್ತಿಯಲ್ಲಿವೆ. ಪ್ರತಿನಿತ್ಯ 14 ವಾರ್ಡ್‌ಗಳಿಗೆ ನೀರು ಹರಿಸಲಾಗುತ್ತಿದೆ. 8 ವಾರ್ಡ್‌ಗಳಿಗೆ ಎರಡು ದಿನಕ್ಕೆ, 9 ವಾರ್ಡ್‌ಗಳಿಗೆ 3 ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ಕೆಲ ಬಡಾವಣೆಗಳಲ್ಲಿ ಟ್ಯಾಂಕರ್‌ ಮೂಲಕ ಆಯಾ ವಾರ್ಡ್‌ನ ಸದಸ್ಯರ ಕೋರಿಕೆಯ ಮೇರೆಗೆ ಕಳುಹಿಸಲಾಗುತ್ತಿದೆ. ತುರ್ತು ಸೇವೆಗಾಗಿಯೇ 3 ಟ್ಯಾಂಕರ್‌ಗಳಿವೆ.

ADVERTISEMENT

ಪಟ್ಟಣದ ಜನರು ಶಾಶ್ವತ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ‘ಶಾಸಕರು ಚುನಾವಣೆಯ ಭರವಸೆಯನ್ನು ಈಡೇರಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ. ಬಹುದಿನಗಳಿಂದ ಕೊಳವೆಬಾವಿಯ ಫ್ಲೋರೈಡ್‌ ನೀರನ್ನೇ ಕುಡಿಯುತ್ತಿದ್ದು, ರೋಗದಿಂದ ಮುಕ್ತರಾಗುವ ಕಾಲ ಬರುತ್ತದೆಯೆ? ನಮ್ಮ ಕಾಲ ಮುಗಿಯಿತು’ ಎನ್ನುವ ಹಿರಿಯರು, ‘ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಭವಿಷ್ಯವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೊಳವೆಬಾವಿ ನೀರು ಕಲುಷಿತ: ‘ನೆಲಮಂಗಲ ಕೆರೆಯು ಸಂಪೂರ್ಣ ಕಲುಷಿತಗೊಂಡಿದ್ದು, ನಗರದ ಹೊಲಸನ್ನು ಕೆರೆಗೆ ಬಿಡಲಾಗುತ್ತಿದೆ. ಕೆರೆಯ ತುಂಬ ಜೊಂಡು ತುಂಬಿ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆಯಾಗಿದೆ. ಪಟ್ಟಣದಾದ್ಯಂತ ರಸ್ತೆಗಳಲ್ಲೇ ಪಿಟ್‌ಗಳಿದ್ದು, ಕೆರೆಗೆ ಬಿಡುತ್ತಿರುವ ಹೊಲಸು ಹಾಗೂ ಪಿಟ್‌ಗಳಿಂದ ಕೊಳವೆಬಾವಿ ನೀರು ಕಲುಷಿತವಾಗಿದೆ. ನಮ್ಮ ಹೊಲಸನ್ನು ನಾವೇ ಕುಡಿಯುವಂತಾಗಿದೆ’ ಎಂದು ರಾಷ್ಟ್ರೀಯ ಕಿಸಾನ್‌ ಸಂಘಟನೆ ರಾಜ್ಯ ಉಪಾಧ್ಯಕ್ಷ ಕೆ.ಭೀಮಯ್ಯ ದೂರಿದರು.

‘ನೆಲಮಂಗಲ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮ ನಡೆಯುತ್ತಿದೆ. ಕೆರೆ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಎಲ್ಲಿ ಹೋಗುತ್ತಿದೆ? ಕೆರೆ ಅಭಿವೃದ್ಧಿಯಾದರೆ ನೀರು ಶೇಖರಣಾ ಸಾಮರ್ಥ್ಯ ಹೆಚ್ಚಿ ಕೊಳವೆಬಾವಿಗಳಲ್ಲಿ ನೀರು ಭರ್ತಿಯಾಗಿತ್ತದೆ. ಶುದ್ಧ ನೀರು ಸಿಗುತ್ತದೆ. ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆ ಮಾಡಿದರೆ ಅಂತರ್ಜಲ ಮಲಿನವಾಗುವುದು ತಪ್ಪುತ್ತದೆ’ ಎಂದು ಕನ್ನಡ ಸಾಂಸ್ಕೃತಿಕ ರಂಗದ ಸಿದ್ದರಾಜು ತಿಳಿಸಿದರು.

‘ತಾಲ್ಲೂಕಿನ ಅರೆಬೊಮ್ಮನಹಳ್ಳಿ ಪಂಚಾಯಿತಿಯ ಸೂಲಕುಂಟೆ ಗ್ರಾಮದಲ್ಲಿ ನಾಲ್ಕಾರು ಮನೆಗಳಿಗೆ ಐದಾರು ತಿಂಗಳಿಂದ ನೀರು ಪೂರೈಸುತ್ತಿಲ್ಲ’ ಎಂದು ಗ್ರಾಮದ ಪೂಜವೆಂಕಟಯ್ಯ  ದೂರಿದರು.

ಲಾವಣ್ಯ
ಸಾವಿತ್ರಿ
ಮನೆಗಳಿಗೆ ಟ್ಯಾಂಕರ್ ನೀರು ಹಾಕಿಸುತ್ತಿರುವುದು

ಖಾಸಗಿ ಟ್ಯಾಂಕರ್‌ಗಳಿಂದ ನೀರು ಖರೀದಿ ‘

ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ಖಾಸಗಿ ಟ್ಯಾಂಕರ್‌ ನೀರು ಖರೀದಿಸುತ್ತಿದ್ದೇವೆ. ನಗರಸಭೆಯ ಟ್ಯಾಂಕರ್ ನೀರು ಪ್ರಭಾವಿಗಳಿಗಷ್ಟೆ ಸೀಮಿತವಾಗಿದೆ. ನಮ್ಮದು ಎರಡು ಮನೆ ಇದೆ. ನಾಲ್ಕು ಜನರಿದ್ದೇವೆ. ಆದರೂ  ನೀರಿನ ಕೊರತೆ ಉಂಟಾಗುತ್ತಿದೆ’ ಎಂದು ಪಟ್ಟಣದ ಗಜಾರಿಯಾ ಬಡಾವಣೆ ನಿವಾಸಿ ಲಾವಣ್ಯ ಸಂಕಷ್ಟ ಹೇಳಿಕೊಂಡರು. ನೀರು ಸಣ್ಣಗೆ ಬರುತ್ತೆ ‘ಎರಡು ದಿನಕ್ಕೆ ಮೂರು ದಿನಕ್ಕೆ ಮನಸ್ಸಿಗೆ ಬಂದಹಾಗೆ ನೀರು ಬಿಡುತ್ತಾರೆ. ನೀರು ಬಿಟ್ಟರೂ ಸಣ್ಣಗೆ ಬರುತ್ತದೆ. ಇದರಿಂದ ಬಹಳ ಸಮಸ್ಯೆಯಾಗಿದೆ. ಟ್ಯಾಂಕರ್‌ ನೀರಿನ ಮೊರೆಹೋಗಬೇಕಾಗುತ್ತಿದೆ. ಈಗಾಗಲೆ ಹಲವು ಬಾರಿ ಟ್ಯಾಂಕರ್‌ ನೀರು ಖರೀದಿಸಿದ್ದೇವೆ. ಈಗಲೇ ಹೀಗಾದರೆ ಬೇಸಿಗೆಯಲ್ಲಿ ಯಾವ ಪರಿಸ್ಥಿತಿ ಎದುರಾಗಬಹುದು?’ ಎಂದು ಪಟ್ಟಣದ ಎಂ.ಜಿ.ರಸ್ತೆ ನಿವಾಸಿ ಸಾವಿತ್ರಿ ಆತಂಕ ವ್ಯಕ್ತಪಡಿಸಿದರು.

- ‘ಬೇಡಿಕೆ ಮೇರೆಗೆ ಟ್ಯಾಂಕರ್‌ ನೀರು’ ‘

ನಿವಾಸಿಗಳ ಬೇಡಿಕೆಯ ಮೇರೆಗೆ ಟ್ಯಾಂಕರ್‌ಗಳನ್ನು ಕಳುಹಿಸಲಾಗುತ್ತಿದೆ. ಒಟ್ಟಾರೆಯಾಗಿ ನೀರಿನ ಕೊರತೆಯಾಗದಂತೆ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ನಗರಸಭೆ ಆಯುಕ್ತ ಮನುಕುಮಾರ್‌. ನಗರ ವ್ಯಾಪ್ತಿಯಲ್ಲಿ ಹೊಸದಾಗಿ 18 ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ಪ್ರತಿ ಶನಿವಾರ ನಗರದ ನೀರಿನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು ತುರ್ತುಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ 28 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಪ್ರತಿ ವ್ಯಕ್ತಿಗೂ 55 ಲೀಟರ್‌ ಪೂರೈಸುವ ಗುರಿ ಹೊಂದಿದ್ದು ಅನಿವಾರ್ಯ ಕಾರಣಗಳಿಂದ ತೊಂದರೆಯಾದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮನುಕುಮಾರ್‌ ಹೇಳಿದರು.

ಕೃಷಿ ಕೊಳವೆಬಾವಿಗಳಲ್ಲಿ ನೀರಿಲ್ಲ

ನೆಲಮಂಗಲ ತಾಲ್ಲೂಕಿನಲ್ಲಿ ರೈತರೂ ಹೆಚ್ಚಾಗಿದ್ದು ಕೃಷಿಗೆ ಕೊಳವೆಬಾವಿಗಳೇ ಆಸರೆ. ಆದರೆ ಸಾವಿರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇರುವ ಕೊಳವೆಬಾವಿಗಳಲ್ಲಿ ನೀರು ಬತ್ತುವ ಸ್ಥಿತಿಗೆ ತಲುಪಿವೆ. ‘ತಾಲ್ಲೂಕಿನಲ್ಲಿ 360 ಜನವಸತಿ ಗ್ರಾಮಗಳು 208 ಕಂದಾಯ ಗ್ರಾಮಗಳಿವೆ 21 ಗ್ರಾಮ ಪಂಚಾಯಿತಿಗಳಿದ್ದು ಜಲ ಜೀವನ ಯೋಜನೆ ಅಡಿಯಲ್ಲಿ ಮನೆಮನೆಗೆ ಗಂಗೆ ಅನುಷ್ಠಾನದ ವ್ಯವಸ್ಥೆಗಾಗಿ ಮನೆಗಳಿಗೆ ಪೈಪ್‌ ಹಾಕಲಾಗುತ್ತಿದೆ ಮೋಟರ್‌ ಪಂಪ್‌ ಅಳವಡಿಸಿದೆ ಶೇ 80 ರಷ್ಟು ಕಾಮಗಾರಿ ಪೂರ್ಣವಾಗಿದ್ದು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಕೊನೆಯ ಹಂತದಲ್ಲಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಭುಗಿಲೇಳುವಷ್ಟರಲ್ಲಿಯೇ ಕೊರತೆಗಳನ್ನು ನೀಗಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ತಾಲ್ಲೂಕಿನಲ್ಲಿ ಸಮಸ್ಯೆಗಳಿರುವ 21 ಗ್ರಾಮಗಳನ್ನು ಗುರುತಿಸಲಾಗಿದೆ. ಬರ ಪರಿಹಾರಕ್ಕೆ ತಾಲ್ಲೂಕು ಆಡಳಿತ ಸಜ್ಜಾಗಿದೆ’ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಲ್‌.ಮಧು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.