ADVERTISEMENT

ಮೂವರು ಮೃತಪಟ್ಟ ಘಟನೆಯಲ್ಲಿ ಜಲಮಂಡಳಿಯಿಂದಲೂ ಲೋಪ: ತುಷಾರ್‌

ಮೂವರು ಎಂಜಿನಿಯರ್‌ಗಳ ಅಮಾನತು: ಪರಿಹಾರ ನೀಡುವುದು ಗುತ್ತಿಗೆ ಕಂಪನಿಯ ಹೊಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:14 IST
Last Updated 17 ಜೂನ್ 2019, 20:14 IST
   

ಬೆಂಗಳೂರು: ‘ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕುಸಿದು ಮೂವರು ಮೃತಪಟ್ಟ ಘಟನೆಯಲ್ಲಿ ಜಲಮಂಡಳಿಯ ಲೋಪವೂ ಇದೆ. ಇದಕ್ಕಾಗಿ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹೇಳಿದರು.

ಹೆಬ್ಬಾಳ ಎಸ್‌ಟಿಪಿ ಕಾಮಗಾರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ಎಂ. ವೆಂಕಟಶಿವ ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿ
ನಿಯರ್‌ ಮಹಮ್ಮದ್‌ ಹನೀಫ್‌ ಯತ್ನಟ್ಟಿ ಹಾಗೂ ಸಹಾಯಕ ಎಂಜಿನಿಯರ್‌ ಕೆ.ವಿ. ಭಾಗ್ಯಲಕ್ಷ್ಮಿ ಅಮಾನತುಗೊಂಡವರು.

‘ಕಾಮಗಾರಿಯನ್ನು ಸೂರತ್‌ನ ಎನ್ವಿರೊ ಕಂಟ್ರೋಲ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆ ಕಂಪನಿಯವರು ಎಸ್‌ಎಂಸಿ ಇನ್ಫ್ರಾಸ್ಟ್ರಕ್ಚರ್‌ ಕಂಪನಿಗೆ ಉಪಗುತ್ತಿಗೆ ನೀಡಿದ್ದರು. ಎನ್‌ಐಎಸ್‌ ಎಂಜಿನಿಯರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯವರು ಕಾಮಗಾರಿಯ ಯೋಜನಾ ಸಲಹೆಗಾರರಾಗಿದ್ದರು.ಕಾಮಗಾರಿ ಒಪ್ಪಂದದಲ್ಲಿ ಇದಕ್ಕೆಲ್ಲ ಅವಕಾಶ ಇದೆ. ಕಾಮಗಾರಿಯ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ, ಸಭೆಗಳೂ ನಡೆಯುತ್ತಿದ್ದವು. ಆದರೆ, ದುರ್ಘಟನೆ ಸಂಭವಿಸಿದ ವೇಳೆ ಮಂಡಳಿಯ ಎಂಜಿನಿಯರ್‌ಗಳು ಸ್ಥಳದಲ್ಲಿ ಇರಲಿಲ್ಲ. ಯೋಜನೆಯ ಬಹು ಮುಖ್ಯವಾದ ಚಾವಣಿಯ ಕಾಂಕ್ರೀಟ್‌ ಕೆಲಸ ಮಾಡುವಾಗ ಇಲಾಖೆಯವರು ಅಲ್ಲಿರಬೇಕಿತ್ತು. ಇದು ಜಲಮಂಡಳಿಯ ಲೋಪ. ಹೀಗಾಗಿ ಈ ಹೊಣೆಗಾರಿಕೆ ಹೊಂದಿದ್ದ ಮೂವರನ್ನುಅಮಾನತಿನಲ್ಲಿ ಇಡಲಾಗಿದೆ’ ಎಂದು ಪತ್ರಕರ್ತರಿಗೆ ತಿಳಿಸಿದರು.

ಅವಸರದ ಕಾಮಗಾರಿ ಅಲ್ಲ: ‘ಘಟಕ ನಿರ್ಮಾಣಕ್ಕೆ 36 ತಿಂಗಳ ಕಾಲಾವಕಾಶ ನೀಡಲಾಗಿದೆ. ಇದೇನೂ ಅವಸರದ ಕಾಮಗಾರಿ ಅಲ್ಲ. ಆದರೆ, ಚಾವಣಿಯ ಕಾಂಕ್ರೀಟ್‌ ಕಾಮಗಾರಿ ಒಂದೇ ದಿನದಲ್ಲಿ ಮುಗಿಯಬೇಕಿತ್ತು. ಅದಕ್ಕಾಗಿಯೇ ಬೆಳಿಗ್ಗೆ 5 ಗಂಟೆಗೇ ಕೆಲಸ ಆರಂಭಿಸಿದ್ದರು. ಬೆಳಿಗ್ಗೆ 11ರ ವೇಳೆಗೆ ಶೇ 95ರಷ್ಟು ಕಾಂಕ್ರೀಟ್‌ ಕಾಮಗಾರಿ ಕೊನೆಗೊಂಡಿತ್ತು. ಹಲವಾರು ಕಾರ್ಮಿಕರು ಸ್ಥಳದಿಂದ ನಿರ್ಗಮಿಸಿದ್ದರು. ಹೀಗಾಗಿಯೇ ಸಾವಿನ ಸಂಖ್ಯೆ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

ಹೇಳಬೇಕಾದವರೇ ಇಲ್ಲ: ‘ದುರಂತದಿಂದಾಗಿ ಚಾವಣಿಯ ಮೇಲೆ ನಿಂತಿದ್ದವರೆಲ್ಲಾ ಸುಮಾರು 33 ಮೀಟರ್‌ನಷ್ಟು ಕೆಳಗೆ ಬಿದ್ದರು. ಈ ಪೈಕಿ ಸತ್ತವರು ಕಾಮಗಾರಿಯ ಗುಣಮಟ್ಟ ಪರಿಶೀಲಿಸುವವರು. ಎಲ್ಲಿ ಲೋಪವಾಗಿತ್ತು ಎಂದು ಹೇಳುವವರೇ ಈಗ ಇಲ್ಲವಾಗಿದ್ದಾರೆ. ತನಿಖೆಯಿಂದಷ್ಟೇ ಘಟನೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ’ ಎಂದು ಅವರು ಹೇಳಿದರು.

ಮೃತಪಟ್ಟವರಿಗೆ ಜಲಮಂಡಳಿಯಿಂದ ಪರಿಹಾರ ನೀಡುವುದಿಲ್ಲ. ಗುತ್ತಿಗೆ ಕಂಪನಿಗೇ ಇದರ ಹೊಣೆ ಇದೆ. ಗಾಯಗೊಂಡವರಿಗೆ ಸಹ ಗುತ್ತಿಗೆ ಕಂಪನಿಯೇ ಚಿಕಿತ್ಸಾ ವೆಚ್ಚ ಭರಿಸಲಿದೆ. ಒಂದು ವೇಳೆ ಗುತ್ತಿಗೆ ಕಂಪನಿ ಭರಿಸದೆ ಇದ್ದರೆ ಜಲಮಂಡಳಿ ಅದನ್ನು ಭರಿಸಲಿದ್ದು,ಬಿಲ್‌ ನೀಡುವಾಗ ಈ ವೆಚ್ಚವನ್ನು ತಡೆಹಿಡಿದು ನೀಡಲಾಗುವುದು ಎಂದರು.

ಜಲಮಂಡಳಿಯ ಕಾಮಗಾರಿ ವೇಳೆಈ ಮೊದಲು ಇಷ್ಟು ದೊಡ್ಡ ಘಟನೆ ನಡೆದಿಲ್ಲ. ಈ ಹಿಂದೆ ಎರಡು ಪ್ರತ್ಯೇಕ ಘಟನೆಗಳಲ್ಲಿ
ಪೈಪ್‌ಲೈನ್‌ ಅಳವಡಿಸುವ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ದುರಂತದ ಬಳಿಕ ಇಂತಹ ಯೋಜನೆಗಳ ಗುಣಮಟ್ಟ, ಕಾಮಗಾರಿ ವೇಳೆ ಸುರಕ್ಷತೆ ಬಗ್ಗೆ ಇನ್ನಷ್ಟು ನಿಗಾ ವಹಿಸುವ ಹೊಣೆಗಾರಿಕೆ ಜಲಮಂಡಳಿಗೆ ಎದುರಾಗಿದೆ ಎಂದು ಅವರು ತಿಳಿಸಿದರು.

ಶಿಥಿಲ ಓವರ್‌ಹೆಡ್‌ ಟ್ಯಾಂಕ್‌ ತೆರವು

‘ನಗರದಲ್ಲಿ 51ಕ್ಕೂ ಅಧಿಕ ಓವರ್‌ಹೆಡ್‌ ನೀರಿನ ಟ್ಯಾಂಕ್‌ಗಳಿದ್ದು, ಶಿಥಿಲಗೊಂಡ ಟ್ಯಾಂಕ್‌ಗಳನ್ನು ಗುರುತಿಸಿ ಶೀಘ್ರ ತೆರವುಗೊಳಿಸಲಾಗುವುದು’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

‘ನಾವು ಓವರ್‌ಹೆಡ್‌ ಟ್ಯಾಂಕ್‌ಗೆ ಆದ್ಯತೆ ಕೊಡುತ್ತಲೇ ಇಲ್ಲ. ಏನಿದ್ದರೂ ನೆಲಮಟ್ಟದ ನೀರು ಸಂಗ್ರಹಣಾ ಸ್ಥಾವರಗಳನ್ನಷ್ಟೇ ನಿರ್ಮಿಸುತ್ತಿದ್ದೇವೆ. ಈ ಹಿಂದಿನ ಸ್ಥಳೀಯಾಡಳಿತ ಸಂಸ್ಥೆಗಳು ಬಿಬಿಎಂಪಿಗೆ ಸೇರ್ಪಡೆಯಾದ ವೇಳೆ, ಸಂಘ ಸಂಸ್ಥೆಗಳ ವತಿಯಿಂದ ನಿರ್ಮಾಣಗೊಂಡ ಟ್ಯಾಂಕ್‌ಗಳನ್ನು ನಾವು ಪಡೆಯುವುದು ಅನಿವಾರ್ಯವಾಗಿತ್ತು. ಆದರೆ ಹೆಚ್ಚಿನ ಓವರ್‌ ಹೆಡ್‌ ಟ್ಯಾಂಕ್‌ಗಳಲ್ಲಿ ನೀರು ತುಂಬಿಸುವುದನ್ನು ನಿಲ್ಲಿಸಲಾಗಿದೆ. ನಿವೇಶನ ಅತಿಕ್ರಮಣ ಮಾಡುವ ಭಯ ಇರುವುದರಿಂದಲೇ ಶಿಥಿಲಗೊಂಡ ಟ್ಯಾಂಕ್‌ಗಳನ್ನು ಇನ್ನೂ ತೆರವುಗೊಳಿಸಿಲ್ಲ. ತೀರಾ ಶಿಥಿಲಗೊಂಡ ಟ್ಯಾಂಕ್‌ಗಳನ್ನು ಗುರುತಿಸಿ ಅವುಗಳನ್ನು ನೆಲಸಮಗೊಳಿಸಲಾಗುವುದು’ ಎಂದರು.

ಸ್ವತಂತ್ರ ಸಂಸ್ಥೆಯಿಂದ ತನಿಖೆ

ದುರಂತದ ಬಗ್ಗೆ ಇಲಾಖೆಯ ಅಧಿಕಾರಿಗಳೇ ತನಿಖೆ ನಡೆಸಿದರೆ ಜನರಿಗೆ ನಂಬಿಕೆ ಬರಲಾರದು ಎಂಬ ಕಾರಣಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಚೆನ್ನೈನ ಸ್ಟ್ರಕ್ಷರಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಸೆಂಟರ್‌ (ಎಸ್‌ಇಆರ್‌ಸಿ) ಸಂಸ್ಥೆಗಳಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೇ ಐಐಎಸ್‌ಸಿ ತಾಂತ್ರಿಕ ಪರಿಣಿತರನ್ನೂ ಸಂಪರ್ಕಿಸಲಾಗಿದೆ. ಆದರೆ, ಅವರು ವಿದೇಶ ಪ್ರಯಾಣದಲ್ಲಿ ಇರುವುದರಿಂದ ಎಸ್‌ಇಆರ್‌ಸಿ ತಜ್ಞರನ್ನು ಸಂಪರ್ಕಿಸಿ ಅವರಿಂದಲೇ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಇದರ ವೆಚ್ಚವನ್ನು ಗುತ್ತಿಗೆ ಸಂಸ್ಥೆಯೇ ಭರಿಸಬೇಕಾಗುತ್ತದೆ ಎಂದು ತುಷಾರ್‌ ಗಿರಿನಾಥ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.