ಬೆಂಗಳೂರು: ‘ನಗರದಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳ ನೋಂದಣಿ ಕಾರ್ಯ ಮುಗಿದಿದ್ದು, ಶೇ 95ರಷ್ಟು ಟ್ಯಾಂಕರ್‌ಗಳು ನೋಂದಣಿಯಾಗಿವೆ. ನೋಂದಣಿಯಾಗದಿರುವ ಟ್ಯಾಂಕರ್‌ಗಳ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು‘ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
‘ಕೆಲವೆಡೆ ಟ್ರ್ಯಾಕ್ಟರ್‌ಗಳನ್ನು ಮಾರ್ಪಡಿಸಿ ನೀರಿನ ಟ್ಯಾಂಕರ್‌ಗಳಾಗಿ ಪರಿವರ್ತಿಸಲಾಗಿದೆ. ಇವುಗಳ ಮೇಲೆಯೂ ನಿಗಾ ಇಡಲಾಗುವುದು. ನೋಂದಣಿಗಾಗಿ ಗಡುವು ನೀಡಿದ ಅವಧಿಯಲ್ಲಿ ನೋಂದಣಿ ಮಾಡದಿರುವ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು‘ ಎಂದು ಹೇಳಿದರು.
ನಗರದ ಬಾಷ್ಯಂ ಪಾರ್ಕ್, ದೀನ ಬಂಧು ನಗರ, ಶ್ರೀ ರಾಮನಗರಿ ಸೇರಿದಂತೆ ಕೆಲವು ಕೊಳೆಗೇರಿ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ನಾಗರಿಕರಿಂದ ನೀರಿನ ಪೂರೈಕೆ ಕುರಿತು ಅವರು ಮಾಹಿತಿ ಪಡೆದುಕೊಂಡರು.
‘ಕಾವೇರಿ ನೀರಿನ ಸಂಪರ್ಕವಿರುವ ಪ್ರದೇಶಗಳಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಎಲ್ಲಾ ಭಾಗಗಳಲ್ಲಿ ಟ್ಯಾಂಕ್‌ಗಳನ್ನು ಅಳವಡಿಸಿ, ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದರು.
‘ನಗರದ ಹೊರವಲಯದಲ್ಲಿರುವ ಗ್ರಾಮಗಳಿಗೆ ಇನ್ನೂ ಕಾವೇರಿ ನೀರಿನ ಸಂಪರ್ಕ ನೀಡಿಲ್ಲ. ಇಲ್ಲಿನ ನಿವಾಸಿಗಳು ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಪ್ರದೇಶಗಳಲ್ಲೂ ಬಿಬಿಎಂಪಿ ಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
‘ನಗರದ ಹೊರವಲಯದ ಗ್ರಾಮಗಳಿಗೂ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.