ADVERTISEMENT

ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಬೆಂಗಳೂರಿನ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯತಿ ದರದಲ್ಲಿ ಮಾರಾಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 11:30 IST
Last Updated 20 ಫೆಬ್ರುವರಿ 2024, 11:30 IST
<div class="paragraphs"><p>ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಕ್ಕೆ ಚಾಲನೆ ನೀಡಿದರು. (ಎಡದಿಂದ) ಹಾಪ್‌ಕಾಮ್ಸ್‌ ಉಮಾಶಂಕರ್ ಮಿರ್ಜಿ, ದೇವರಾಜ್ ಭಾಗವಹಿಸಿದ್ದರು</p></div>

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಕ್ಕೆ ಚಾಲನೆ ನೀಡಿದರು. (ಎಡದಿಂದ) ಹಾಪ್‌ಕಾಮ್ಸ್‌ ಉಮಾಶಂಕರ್ ಮಿರ್ಜಿ, ದೇವರಾಜ್ ಭಾಗವಹಿಸಿದ್ದರು

   

–ಪ್ರಜಾವಾಣಿ ಚಿತ್ರ/ರಂಜು ಪಿ

ಬೆಂಗಳೂರು: ‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೆಳೆದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ADVERTISEMENT

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್‌) ವತಿಯಿಂದ ಬುಧವಾರ ಆಯೋಜಿಸಿದ್ದ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

‘ಬೇಸಿಗೆ ಕಾಲದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚು, ಆದ್ದರಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹೆಚ್ಚು ಹಣ್ಣುಗಳನ್ನು ಖರೀದಿಸುವುದರ ಮೂಲಕ ರೈತರಿಗೆ ನೆರವಾಗಬೇಕು’ ಎಂದು ಕರೆ ನೀಡಿದರು.

‘ಕರಾವಳಿ ಮತ್ತು ಮಲೆನಾಡಿನ ಪ್ರದೇಶ ಹೊರತುಪಡಿಸಿ ರಾಜ್ಯದಾದ್ಯಂತ ಬೆಳೆದ ಕಿರಣ್ ಕಲ್ಲಂಗಡಿ, ಹಳದಿ ಬಣ್ಣದ ಕಲ್ಲಂಗಡಿ, ಮತ್ತು ವಿಜಯಪುರ, ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಬೆಳೆದ ಬೆಂಗಳೂರು ನೀಲಿ, ಕೃಷ್ಣ ಶರದ್, ಥಾಮ್ಸನ್ ಸೀಡ್‌ಲೆಸ್, ಸೋನಾಕ,  ಸೂಪರ್ ಸೋನಾಕ, ಇಂಡಿಯನ್‌ ರೆಡ್ ಗ್ಲೋಬ್ ಸೇರಿದಂತೆ ಸುಮಾರು 13ರಿಂದ 15 ತಳಿಯ ದ್ರಾಕ್ಷಿ ಹಣ್ಣುಗಳನ್ನು ಮೇಳದಲ್ಲಿ ಖರೀದಿಸಬಹುದು’ ಎಂದರು. 

‘ನಗರದಲ್ಲಿರುವ 211 ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಮೇಳದಲ್ಲಿ ಒಂದು ಕೆ.ಜಿ. ದ್ರಾಕ್ಷಿಗೆ ಕನಿಷ್ಠ ₹46 ರಿಂದ ಗರಿಷ್ಠ ₹230 ರವರೆಗೂ ದರವಿದೆ. ಒಂದು ಕೆ.ಜಿ. ಕಲ್ಲಂಗಡಿಗೆ ಕನಿಷ್ಠ ₹31 ರಿಂದ ₹ ಗರಿಷ್ಠ ₹38ರವರೆಗೂ ಇದೆ’ ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ದೇವರಾಜ್‌ ತಿಳಿಸಿದರು.

‘ರಾಜ್ಯದಲ್ಲಿ ಒಟ್ಟು 36,117 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ತಳಿಯ ದ್ರಾಕ್ಷಿಗಳನ್ನು ಬೆಳೆಯಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ 31,086 ಹೆಕ್ಟೇರ್‌ ಪ್ರದೇಶದಲ್ಲಿ ಬೀಜರಹಿತ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 7,74,993 ಮೆಟ್ರಿಕ್‌ ಟನ್ ದ್ರಾಕ್ಷಿ ಉತ್ಪನ್ನ ಬೆಳೆಯಲಾಗಿದೆ. ಅದರ ಜೊತೆಗೆ 4,700 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದೆ. ಈ ಬಾರಿ ಒಟ್ಟು 1,98,973 ಮೆಟ್ರಿಕ್ ಟನ್‌ ಕಲ್ಲಂಗಡಿ ಉತ್ಪನ್ನ ಬೆಳೆಯಲಾಗಿದೆ. ಮೇಳದಲ್ಲಿ 500 ಮೆಟ್ರಿಕ್‌ ಟನ್‌ ದ್ರಾಕ್ಷಿ ಹಾಗೂ 900 ಮೆಟ್ರಿಕ್‌ ಟನ್‌ ಕಲ್ಲಂಗಡಿ ಹಣ್ಣು ಮಾರಾಟ ಮಾಡುವ ಗುರಿ ಇದೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್‌ ಮಿರ್ಜಿ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.