ಬೆಂಗಳೂರು: ‘ನಾವು ವಿಶಿಷ್ಟ ಸಾಮಾಜಿಕ ಸಂದರ್ಭದಲ್ಲಿ ಬದುಕುತ್ತಿದ್ದೇವೆ. ಮಾತು ಸಂವಾದವಾಗುವ ಬದಲು ಜಗಳವಾಗಿ ಮಾರ್ಪಡುತ್ತಿದೆ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿ ನಡೆದ ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ತಮಿಳು ಹಾಗೂ ಮಲಯಾಳಂ ಬರಹಗಾರ ಬಿ.ಜಯಮೋಹನ್ ಅವರಿಗೆ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ ಪ್ರದಾನ ಮಾಡಲಾಯಿತು. ಈ ಪುರಸ್ಕಾರವು ₹ 2 ಲಕ್ಷ ನಗದು ಒಳಗೊಂಡಿದೆ.
ಈ ವೇಳೆ ಮಾತನಾಡಿದ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಪ್ರಜಾಪ್ರಭುತ್ವದ ಜೀವಾಳವೇ ಸಂವಾದ. ಆದರೆ, ಈಗ ಆ ಸಂವಾದಕ್ಕೆ ಅವಕಾಶ ಇಲ್ಲವಾಗಿದೆ. ಪ್ರಭುತ್ವವು ನಮ್ಮ ಸಾಮಾಜಿಕ ಬದುಕನ್ನು ಮಾತ್ರವಲ್ಲದೇ, ಬೌದ್ಧಿಕ ಸ್ವಾತಂತ್ರ್ಯವೂ ಇಲ್ಲದ ಸ್ಥಿತಿ ನಿರ್ಮಿಸಿದೆ. ಇಂತಹ ಸನ್ನಿವೇಶದಲ್ಲಿ ಸ್ವಾಯತ್ತ ಪ್ರಜ್ಞೆ ಉಳಿಸಿಕೊಳ್ಳುವುದು ಅಗತ್ಯ’ ಎಂದರು.
‘ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಈ ಕಾಲದಲ್ಲಿ, ಸ್ವಾರ್ಥ ಕೇಂದ್ರಿತ ಜಗತ್ತಿನ ಕಡೆ ಹೆಜ್ಜೆ ಹಾಕಲಾಗುತ್ತಿದೆ. ಒಬ್ಬೊಬ್ಬ ವ್ಯಕ್ತಿಯೂ ತನ್ನದೆ ಆದ ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದಾನೆ. ಆದ್ದರಿಂದ ಎಲ್ಲರನ್ನೂ ಒಳಗೊಂಡು ಸಾಗುವ ಪ್ರಯತ್ನಗಳು ಹೆಚ್ಚಬೇಕು. ಆಧುನಿಕ ಜಗತ್ತಿನ ಸವಾಲು, ಸಂಕಟಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು’ ಎಂದು ಹೇಳಿದರು.
‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ಕ್ಕೆ ಆಯ್ಕೆಯಾದವರ ಹೆಸರು ಘೋಷಿಸಿದ ಸಾಹಿತಿ ಹಂ.ಪ. ನಾಗರಾಜಯ್ಯ, ‘ರಾಜಕಾರಣಿಗಳ ಅನುಪಸ್ಥಿಯಲ್ಲಿ ಈ ಉತ್ಸವವು ಅರ್ಥಪೂರ್ಣವಾಗಿ ನಡೆದಿದೆ. ಬರಹಗಾರರು, ಪ್ರಕಾಶಕರು, ಪುಸ್ತಕ ಮಾರಾಟಗಾರರು ಹಾಗೂ ಓದುಗರಿಗೆ ಉತ್ತಮ ವೇದಿಕೆ ಕಲ್ಪಿಸಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ನಮ್ಮಲ್ಲಿನ ಕಲೆಯನ್ನು ನಾವು ಮಾತ್ರ ನೋಡದೆ, ಹೊರಗಿನವರೂ ವೀಕ್ಷಿಸಬೇಕು. ಕೂಚಿಪುಡಿ, ಭರತನಾಟ್ಯ, ಕಥಕ್ ಸೇರಿ ವಿವಿಧ ನೃತ್ಯ ಪ್ರಕಾರ, ಕಲೆ, ಸಂಗೀತ, ಸಾಹಿತ್ಯದ ವೈವಿಧ್ಯ ಒಟ್ಟಿಗೆ ಸೇರಬೇಕು. ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಎಲ್ಲ ರಾಜ್ಯದವರೂ ಒಟ್ಟಾಗಿ ಸಾಗಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.