ADVERTISEMENT

ಬ್ರ್ಯಾಂಡ್‌ ಬೆಂಗಳೂರು ಬೇಡ, ಸುರಕ್ಷಿತವಾದ ಬೆಂಗಳೂರು ಬೇಕು: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:41 IST
Last Updated 24 ಅಕ್ಟೋಬರ್ 2024, 15:41 IST
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ ಅವರು ಬಾಬು ಸಾ ಪಾಳ್ಯದಲ್ಲಿ ಕಟ್ಟಡ ಕುಸಿದಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಬೈರತಿ ಬಸವರಾಜು, ಡಾ. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ ಅವರು ಬಾಬು ಸಾ ಪಾಳ್ಯದಲ್ಲಿ ಕಟ್ಟಡ ಕುಸಿದಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಬೈರತಿ ಬಸವರಾಜು, ಡಾ. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು   

ಬೆಂಗಳೂರು: ‘ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಅವರು ನಮಗೆ ‘ಬ್ರ್ಯಾಂಡ್‌ ಬೆಂಗಳೂರು’ ನೀಡುವುದು ಬೇಡ. ಸುರಕ್ಷಿತವಾದ ಬೆಂಗಳೂರು ನೀಡಿದರೆ ಸಾಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು.

ಬಾಬು ಸಾ ಪಾಳ್ಯದಲ್ಲಿ ಕಟ್ಟಡ ಕುಸಿದಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಾಬು ಸಾ ಪಾಳ್ಯದಲ್ಲಿ ಕಟ್ಟಡ ಕುಸಿತವಾಗಿದ್ದು, ಎಂಟು ಅಮಾಯಕರು ಮೃತರಾಗಿದ್ದಾರೆ. ಇಲ್ಲಿನ 20 ಅಡಿ ರಸ್ತೆಗೆ ಹೆಚ್ಚೆಂದರೆ ಮೂರು ಮಹಡಿ ನಿರ್ಮಿಸಬಹುದು. ಆದರೆ ಏಳು ಮಹಡಿ ನಿರ್ಮಿಸಲು ಹೊರಟಿದ್ದರಿಂದ ಅವಘಡ ನಡೆದಿದೆ. ಸರ್ಕಾರ ಗಾಢ ನಿದ್ದೆಯಲ್ಲಿದ್ದು, ಮೃತಪಟ್ಟವರ ಕುಟುಂಬಗಳ ಶಾಪ ತಟ್ಟಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಗರದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಯಾವ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ವಿದ್ಯುತ್‌ ತಂತಿ ತಗುಲಿ ತಾಯಿ ಮತ್ತು ಮಗು ಮೃತಪಟ್ಟಾಗ ಅದಕ್ಕೆ ಇಲಿ ಕಾರಣ ಎಂದು ಹೇಳಿದ್ದರು. ಮಳೆ ನೀರಿನಲ್ಲಿ ಮಗು ಕೊಚ್ಚಿಕೊಂಡು ಹೋಗಿರುವುದು, ಮರ ಬೀಳುವುದರಿಂದ ಅನಾಹುತವಾಗುವುದೆಲ್ಲವೂ ‘ಬ್ರ್ಯಾಂಡ್‌ ಬೆಂಗಳೂರು’ ಮಹಿಮೆಯಿಂದಲೇ ಆಗುತ್ತಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುವ ರಸ್ತೆಯ ಎರಡೂ ಬದಿ ಕಸ ರಾಶಿಯಾಗಿ ಬಿದ್ದಿದೆ. ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಬಿಜೆಪಿ ಸರ್ಕಾರವಿದ್ದಾಗ, ಪ್ರತಿ ಮಳೆಗಾಲಕ್ಕೆ ಮುನ್ನ ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗುತ್ತಿತ್ತು. ಜೊತೆಗೆ ಹಣ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಸರ್ಕಾರ ಸಭೆ ನಡೆಸಿಲ್ಲ, ಪರಿಹಾರ ಕಾರ್ಯಾಚರಣೆಗೆ, ರಾಜಕಾಲುವೆ ಹೂಳು ತೆಗೆಯಲು ಹಣವನ್ನೂ ಬಿಡುಗಡೆ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲದ್ದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

‘ರಾಜಕೀಯ ಒತ್ತಡದಿಂದ ಘೋರ ದುರಂತ’

‘ಬೆಂಗಳೂರು ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅಂಕೆಯೇ ಇಲ್ಲ. ಭ್ರಷ್ಟಾಚಾರ ರಾಜಕೀಯ ಒತ್ತಡ ಇಂಥ ಘೋರ ದುರಂತಗಳಿಗೆ ಕಾರಣ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

‘ಬೆಂಗಳೂರಿನ ಬಾಬು ಸಾ ಪಾಳ್ಯದ ಕಟ್ಟಡ ಕುಸಿದ ದುರಂತ ಆಘಾತಕಾರಿ. ಈ ದುರ್ಘಟನೆಯಲ್ಲಿ ಬಡ ಕೂಲಿಕಾರ್ಮಿಕರು ಜೀವ ತೆತ್ತಿರುವುದು ಬಿಬಿಎಂಪಿಯ ನಿರ್ಲಕ್ಷ್ಯ ಅದಕ್ಷತೆಗೆ ಹಿಡಿದ ಕನ್ನಡಿ.  ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿರುವುದೇನೋ ಸರಿ. ಆದರೆ ಇಂಥ ದುರ್ಘಟನೆಗಳು ಭವಿಷ್ಯದಲ್ಲಿ ಘಟಿಸಬಾರದು. ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.