ಬೆಂಗಳೂರು:‘ಕೇರಳ ರಾಜ್ಯವು 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲಿದೆ. ಈ ದಿಶೆಯಲ್ಲಿ ನಾವು ಹೆಜ್ಜೆ ಇಡುತ್ತಿದ್ದೇವೆ’ ಎಂದು ಕೇರಳ ರಾಜ್ಯದ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ತಿಳಿಸಿದರು.
‘ಸಾರ್ವಜನಿಕ ವಲಯದ ರಕ್ಷಣೆಗಾಗಿ ಬೆಂಗಳೂರು‘ ಶುಕ್ರವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ‘ಸಾರ್ವಜನಿಕ ವಲಯದ ಪುನಶ್ಚೇತನ; ಕೇರಳದ ಅನುಭವ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಅಭಿವೃದ್ಧಿಯಲ್ಲಿ ಸಾರ್ವಜನಿಕ ವಲಯದ ಪಾತ್ರ ಮಹತ್ವದ್ದು. ಸ್ವಾತಂತ್ರ್ಯ ನಂತರ ಅಭಿವೃದ್ಧಿಯ ಕಾರ್ಯತಂತ್ರವೇ ಬದಲಾಯಿತು. ಸರ್ಕಾರವು ಈಗ ಸಾರ್ವಜನಿಕ ವಲಯದ ಸಂಸ್ಥೆಗಳನ್ನೆಲ್ಲಾ ಖಾಸಗೀಕರಣಗೊಳಿಸಲು ಹೊರಟಿದೆ. ಆದರೆ, ನಾವು ಹಾಗೆ ಮಾಡಲಿಲ್ಲ. ಕೇರಳದಲ್ಲಿ ಸಾರ್ವಜನಿಕ ವಲಯವು 115 ಸಂಸ್ಥೆಗಳನ್ನು ಒಳಗೊಂಡಿದೆ. ಅವುಗಳನ್ನು ಬಲಪಡಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಕಾನೂನಿಗೆ ತಿದ್ದುಪಡಿ ತಂದು ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ರಾಜ್ಯ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದೇವೆ. ಇದರಿಂದ ಹೂಡಿಕೆ ಆಕರ್ಷಿಸಲು ನೆರವಾಗಿದೆ. ಕೇಂದ್ರ ಸರ್ಕಾರವು ಕೇರಳ ಬ್ಯಾಂಕ್ ಅನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಈ ಬ್ಯಾಂಕ್ ₹70 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ’ ಎಂದರು.
‘ಆರೋಗ್ಯ ವಲಯವಷ್ಟೇ ಅಭಿವೃದ್ಧಿ ಹೊಂದಿದರೆ ಸಾಲದು. ಅದಕ್ಕೆ ಸಂಬಂಧಪಟ್ಟ ಉತ್ಪಾದನಾ ವಲಯವೂ ಬೆಳೆಯಬೇಕು. ಈ ನಿಟ್ಟಿನಲ್ಲಿ ನಾವು ಇಡಿ ದೇಶಕ್ಕೆ ಮಾದರಿಯಾಗಬೇಕಿದೆ. ನಮ್ಮಲ್ಲಿ₹250 ಮೌಲ್ಯದ ಔಷಧವನ್ನು₹40ಕ್ಕೆ ನೀಡಲಾಗುತ್ತಿದೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಕಾರಣ’ ಎಂದು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.