ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘ಸ್ವಚ್ಛ ಸರ್ವೇಕ್ಷಣಾ’ ಶ್ರೇಯಾಂಕದಲ್ಲಿ ಬೆಂಗಳೂರಿಗೆ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಸಿಕ್ಕಿರುವುದಕ್ಕೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದಾರೆ.
‘ಎಂತಹ ಅವಮಾನ? ಭಾರತದ ಏಕೈಕ ಜಾಗತಿಕ ನಗರ, ಶ್ರೀಮಂತ ನಗರ ಬೆಂಗಳೂರು ಕಸದ ನಗರವಾಯಿತು. ನಾಚಿಕೆಯಾಗುತ್ತಿದೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಕಟ್ಟುನಿಟ್ಟಾದ, ತುರ್ತು ಸುಧಾರಣಾ ಕ್ರಮಗಳಿಗೆ ಆಗ್ರಹಿಸಿರುವ ಪೈ, ತಮ್ಮ ಟ್ವೀಟ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯ ವರದಿ ಶನಿವಾರ ಪ್ರಕಟಗೊಂಡಿದ್ದು, ಬಿಬಿಎಂಪಿ ಕಳೆದ ಬಾರಿಗಿಂತ ಈ ಬಾರಿ 15 ಸ್ಥಾನಗಳಷ್ಟು ಕುಸಿದಿದೆ.
ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 45 ನಗರಗಳ ಸ್ಥಳೀಯ ಸಂಸ್ಥೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ ಬಿಬಿಎಂಪಿ 43ನೇ ಸ್ಥಾನದಲ್ಲಿದೆ. 2020ರಲ್ಲಿ 37ನೇ ಸ್ಥಾನದಲ್ಲಿತ್ತು. 2021ರಲ್ಲಿ ಸುಧಾರಣೆ ಕಂಡು, 28ನೇ ಸ್ಥಾನಕ್ಕೆ ಬಂದಿತ್ತು. ಈಗ ಸಾಕಷ್ಟು ಕುಸಿತ ಕಂಡಿದೆ.
‘ಸ್ವಚ್ಛತೆಯ ಪ್ರಮಾಣ ಅಳೆಯುವ ಮಾನದಂಡ ಬದಲಾಗಿದೆ. ಹೀಗಾಗಿ ಕಳೆದ ವರ್ಷಗಳಿಗೆ ಈ ಸಲದ ಸಮೀಕ್ಷಾ ಫಲಿತಾಂಶವನ್ನು ಹೋಲಿಸಬಾರದು’ ಎಂದು ಬಿಬಿಎಂಪಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.