ADVERTISEMENT

ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಪತ್ತೆಯಾದ ಗಿಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 18:51 IST
Last Updated 4 ಅಕ್ಟೋಬರ್ 2018, 18:51 IST
ಆಫ್ರಿಕನ್‌ ಗಿಳಿ
ಆಫ್ರಿಕನ್‌ ಗಿಳಿ   

ಬೆಂಗಳೂರು: ಅಪರಿಚಿತನೊಬ್ಬ ಕದ್ದುಕೊಂಡು ಹೋಗಿದ್ದ ಆಫ್ರಿಕನ್ ಗಿಳಿ, ವಾಟ್ಸ್‌ಆ್ಯಪ್ ಗ್ರೂಪ್‌ನಿಂದಾಗಿ ಮಾಲೀಕರ ಕೈ ಸೇರಿದೆ.

ನಗರದ ಎಚ್‌ಎಎಲ್‌ ಬಳಿ ಪ್ರದೀಪ್‌ ಯಾದವ್‌ ಎಂಬುವರು ಪಕ್ಷಿಗಳ ಮಾರಾಟ ಅಂಗಡಿ ಇಟ್ಟುಕೊಂಡಿದ್ದಾರೆ. ಆ ಅಂಗಡಿಯಲ್ಲಿದ್ದ ನಾಲ್ಕು ತಿಂಗಳ ಗಿಳಿಯನ್ನು ಸೆಪ್ಟೆಂಬರ್ 27ರಂದು ರಾತ್ರಿ ಯಾರೋ ಕದ್ದುಕೊಂಡು ಹೋಗಿದ್ದರು.

ಎಚ್‌ಎಎಲ್ ಠಾಣೆಗೆ ದೂರು ನೀಡಿದ್ದ ಪ್ರದೀಪ್, ‘₹53 ಸಾವಿರ ಬೆಲೆ ಬಾಳುವ ಗಿಳಿ ಕಳುವಾಗಿದೆ’ ಎಂದಿದ್ದರು. ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ವಾಟ್ಸ್‌ ಆ್ಯಪ್‌ನಿಂದಾಗಿ ಗಿಳಿ ಪತ್ತೆಯಾಗಿದೆ.

ADVERTISEMENT

‘ಬೆಂಗಳೂರಿನ ಪಕ್ಷಿಗಳ ಮಾರಾಟಗಾರರು, ವಾಟ್ಸ್‌ ಆ್ಯಪ್‌ನಲ್ಲಿ ಗ್ರೂಪ್ ಮಾಡಿಕೊಂಡಿದ್ದಾರೆ. ಪಕ್ಷಿಗಳ ಮಾರಾಟ ಹಾಗೂ ಖರೀದಿ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ‘ನನ್ನ ಗಿಳಿ ಕಳುವಾಗಿದೆ’ ಎಂದು ಚಿತ್ರ ಸಮೇತವಾಗಿ ಪ‍್ರದೀಪ್, ಮಾಹಿತಿ ಹಂಚಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಎರಡು ದಿನಗಳ ಬಳಿಕ ಶಿವಕುಮಾರ್‌ ಎಂಬುವರು, ‘ನನ್ನ ಅಂಗಡಿಯಲ್ಲಿ ಆಫ್ರಿಕನ್ ಗಿಳಿ ಮಾರಾಟಕ್ಕಿದೆ’ ಎಂದು ಗ್ರೂಪ್‌ನಲ್ಲಿ ಮಾಹಿತಿ ಹಾಕಿದ್ದರು. ಅದನ್ನು ನೋಡಿ ಅಂಗಡಿಗೆ ಹೋಗಿದ್ದ ಪ್ರದೀಪ್, ಅದು ತಮ್ಮದೇ ಗಿಳಿ ಎಂಬುದನ್ನು ಗುರುತು ಹಿಡಿದಿದ್ದರು. ‘ಅಪರಿಚಿತನೊಬ್ಬ ಈ ಗಿಳಿಯನ್ನು ₹22 ಸಾವಿರಕ್ಕೆ ಮಾರಿದ್ದಾನೆ’ ಎಂದಿದ್ದ ಶಿವಕುಮಾರ್, ಆ ಗಿಳಿಯನ್ನು ಮಾಲೀಕರಿಗೆ ವಾಪಸ್‌ ಕೊಟ್ಟಿದ್ದಾರೆ. ಗಿಳಿ ಕದ್ದವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.