ಬೆಂಗಳೂರು: ‘ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೆಜೆಸ್ಟಿಕ್ ಸುರಂಗ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಯಾವಾಗ, ಪಾದಚಾರಿಗಳು ಧೈರ್ಯವಾಗಿ ಸುತ್ತಾಡುವುದು ಯಾವಾಗ’ ಎಂದು ಸಾರ್ವಜನಿಕರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.
‘ಮೆಜೆಸ್ಟಿಕ್ ಅಕ್ರಮ ವ್ಯಾಪಾರ: ಪ್ರಶ್ನಿಸಿದರೆ ಇರಿತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಡಿ. 31ರಂದು ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲ ಸಾರ್ವಜನಿಕರ ಆಯ್ದ ಅಭಿಪ್ರಾಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
‘ಕೆ.ಆರ್. ಮಾರ್ಕೆಟ್ ಇದಕ್ಕೆ ಭಿನ್ನವಲ್ಲ’
ಮೆಜೆಸ್ಟಿಕ್ ಸುರಂಗ ಮಾರ್ಗವು ರೌಡಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಇಲ್ಲಿಯ ವ್ಯಾಪಾರಿಗಳಿಗೆ ತಮ್ಮದೇ ಆದ ಗುಂಪು ಇದೆ. ಇವರ ಗಾಳಕ್ಕೆ ಸಿಗುವವರಲ್ಲಿ ಅಮಾಯಕರೇ ಹೆಚ್ಚು. ಕಳಪೆ ವಸ್ತುಗಳಿಗೂ ದುಬಾರಿ ಬೆಲೆ ಹೇಳುತ್ತಾರೆ.
ಇವರನ್ನು ಪ್ರಶ್ನಿಸುವಂತಿಲ್ಲ, ಬೇಡ ಎನ್ನುವಂತಿಲ್ಲ. ಅತ್ಯಂತ ಕೆಟ್ಟ ಭಾಷೆಯಲ್ಲಿ ಬೈದು ಕೊರಳಪಟ್ಟಿ ಹಿಡಿದೆಳೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಕೂಗಳತೆ ದೂರದಲ್ಲಿ ಇರುವ ಉಪ್ಪಾರ ಪೇಟೆ ಪೊಲೀಸರಿಗೆ ಇದೆಲ್ಲ ಗೊತ್ತಿದ್ದರೂ ಕಂಡೂ ಕಾಣದಂತಿರುತ್ತಾರೆ. ಕೆ.ಆರ್. ಮಾರ್ಕೆಟ್ ಇದಕ್ಕೆ ಭಿನ್ನವಲ್ಲ. ಅಲ್ಲಿಯೂ ಇದೇ ಸ್ಥಿತಿ ಇದೆ. ಬಿಬಿಎಂಪಿ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಮಾಮೂಲು ವಸೂಲಿಗಾಗಿ ವ್ಯಾಪಾರಿಗಳ ಪರ ವಕಾಲತ್ತು ವಹಿಸುತ್ತಾರೆ. ದೂರು ನೀಡಿದರೆ ದೂರ ಸರಿಯುತ್ತಾರೆ. ಸಂಪ್ರದಾಯ ಸ್ಥರು ಈ ವ್ಯಾಪಾರಿಗಳ ಅವಾಚ್ಯ ಬೈಗುಳಕ್ಕೆ ಕಿವಿಮುಚ್ಚಿಕೊಂಡು ಹೋಗಬೇಕಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಎಸ್. ಪ್ರಭಾಕರ್, ಚಾಮರಾಜಪೇಟೆ
‘ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ’
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ಸುರಂಗ ಮಾರ್ಗದಲ್ಲಿ ವ್ಯಾಪಾರಿಗಳು ಬಳಸಿ ಬಿಸಾಡಿದ ವಸ್ತುಗಳು, ಉಗುಳಿ ಬಣ್ಣಗೆಟ್ಟ ಮೆಟ್ಟಿಲುಗಳು ಜನರ ಸಂಚಾರಕ್ಕೆ ಸಂಚಕಾರ ತಂದಿದೆ. ಲಂಗು ಲಗಾಮಿಲ್ಲದ ಅಂಗಡಿಗಳು ಮತ್ತು ಅವರ ನಡವಳಿಕೆಗಳು, ಎಷ್ಟು ಬೇಗ ಇಲ್ಲಿಂದ ಹೊರಡುತ್ತೇವೋ ಎಂದು ಓಡುವಂತೆ ಮಾಡುತ್ತದೆ. ದಯವಿಟ್ಟು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಂಡು ಜನರು ಸುಗಮವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
-ಪುಷ್ಪಾ ಶ್ರೀರಾಮರಾಜು, ವಸಂತಪ್ಪ ಬ್ಲಾಕ್ ನಿವಾಸಿ
‘ವರ್ತಕರ ಕಂಡರೆ ಭಯ’
ಮೆಜೆಸ್ಟಿಕ್ ಸುರಂಗ ಮಾರ್ಗದಲ್ಲಿ ಸಂಚರಿಸುವಾಗ ಒಂದು ವಸ್ತುವಿನ ಬೆಲೆ ಕೇಳಿದರೆ ಅದರ ದರ ದುಪ್ಪಟ್ಟು ಹೇಳಿ ಖರೀದಿಸುವವರೆಗೂ ಬಿಡುವುದಿಲ್ಲ, ಅಲ್ಲಿನ ವರ್ತಕರನ್ನು ನೋಡಿದರೆ ಈಗಲೂ ಹೆದರಿಕೆ ಬರುತ್ತದೆ. ಇಂತಹ ವ್ಯಾಪಾರಿಗಳ ಹಾವಳಿ ತಪ್ಪಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಯಾವ ಯಾತ್ರಿಕನೂ ಆ ರಸ್ತೆಯನ್ನೇ ಬಳಸುವುದಿಲ್ಲ.
-ಬಾಲಕೃಷ್ಣ ಎಂ. ಆರ್., ಸೀತಪ್ಪ ಲೇಔಟ್, ಆರ್. ಟಿ. ನಗರ ಬೆಂಗಳೂರು
‘ವ್ಯಾಪಾರಿಗಳ ಕಾಟ’
ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಿಗ್ಗೆ 6 ಗಂಟೆಗೆ ಇಳಿದು ಬಂದು ಸುರಂಗ ಮಾರ್ಗದ ಮೂಲಕ ಬಿಎಂಟಿಸಿ ಬಸ್ ನಿಲ್ದಾಣದ ಕಡೆಗೆ ಹೋಗುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.
ಅಮಾಯಕರನ್ನು ಪೀಡಿಸುವ ಲೈಂಗಿಕ ಕಾರ್ಯಕರ್ತರು, ಇವರಿಂದ ತಪ್ಪಿಸಿಕೊಂಡು ಬಂದರೆ ಅಕ್ರಮ ಅಂಗಡಿಗಳ ವ್ಯಾಪಾರಿಗಳು ಪ್ರವಾಸಿಗರನ್ನು ಕೈ ಹಿಡಿದು ವಸ್ತುಗಳನ್ನು ಖರೀದಿಸುವಂತೆ ಬಲವಂತ ಮಾಡುತ್ತಾರೆ.
ಜನಪ್ರತಿನಿಧಿಗಳ ಮತ್ತು ಅಧಿಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ
ಈ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.
–ಮಹೇಶ ಬಂದ್ಯಾ, ಕತ್ರಿಗುಪ್ಪೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.