ಬೆಂಗಳೂರು: ಮೆಟ್ರೊ ಕಾಮಗಾರಿಎಬ್ಬಿಸುವ ದೂಳು, ಟಾರ್ಪಲ್ ಮುಚ್ಚದೇ ಸಂಚರಿಸುವ ಎಂ.ಸ್ಯಾಂಡ್ ಸಾಗಿಸುವ ಲಾರಿಗಳು ಚೆಲ್ಲುತ್ತಾ ಹೋಗುವ ಮರಳಿನ ಕಣ, ಈ ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳು ಹಾಗೂ ವಾಹನಗಳು ಹೊರಸೂಸುವ ಹೊಗೆ... ಇವುಗಳಿಂದ ವೈಟ್‌ಫೀಲ್ಡ್ ಪ್ರದೇಶದಲ್ಲಿ ‘ಕಪ್ಪು’ ಆವರಿಸುತ್ತಿದೆ. ಈ ಪ್ರದೇಶದಲ್ಲಿ ಜನ ಮೂಗಿಗೆ ಬಟ್ಟೆ ಕಟ್ಟಿಕೊಂಡು ಸಂಚರಿಸುವ ಸ್ಥಿತಿ ಉಂಟಾಗಿದೆ.
‘ದೂಳಿನ ಸಮಸ್ಯೆಯಿಂದ ಸುತ್ತಮುತ್ತಲಿನ ಜನರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡಿವೆ. ಆದರೆ, ನಾವು ಇಲ್ಲಿ ಜೀವನ ಮಾಡುವುದು ಅನಿವಾರ್ಯ. ಕಾಮಗಾರಿ ಮುಕ್ತಾಯವಾದ ಬಳಿಕವಾದರೂ ನೆಮ್ಮದಿ ಸಿಕ್ಕೀತು ಎಂಬ ಆಸೆಯಲ್ಲಿದ್ದೇವೆ’ ಎಂದು ಗರುಡಾಚಾರ್ ಪಾಳ್ಯದ ನಿವಾಸಿ, ಹೂವಿನ ವ್ಯಾಪಾರಿ ಲಕ್ಷ್ಮಮ್ಮ ಹೇಳಿದರು.
‘ಕೆ.ಆರ್.ಪುರ– ವೈಟ್‌ಫೀಲ್ಡ್ ನಡುವೆ ‘ನಮ್ಮಮೆಟ್ರೊ’ ಎರಡನೇ ಹಂತದ ರೀಚ್–1ಎ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಇಲ್ಲಿನ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ಈ ಸಮಸ್ಯೆ ಬಗೆಹರಿಸಲು ಸಂಚಾರ ಪೊಲೀಸರು ನಿತ್ಯ ಹರಸಾಹಸ ಪಡುತ್ತಿದ್ದಾರೆ. ಆದರೂ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ’ ಎಂದು ಐ.ಟಿ ಉದ್ಯೋಗಿ ಸಂಜಯ್ ಹೇಳಿದರು.
ಎಲ್ಲೆಲ್ಲಿ ಸಮಸ್ಯೆ?
ಹೂಡಿ ಮುಖ್ಯರಸ್ತೆ, ಕುಂದಲಹಳ್ಳಿ ಮುಖ್ಯರಸ್ತೆ ಹಾಗೂ ಮಹದೇವಪುರ– ಗರುಡಾಚಾರ್ ಪಾಳ್ಯ ಪ್ರದೇಶಗಳಲ್ಲಿ ಸಮಸ್ಯೆ ವಿಪರೀತವಾಗಿದೆ. ಕೆ.ಆರ್.ಪುರದಿಂದ ಮಾರತ್ತಹಳ್ಳಿ ಮಾರ್ಗವಾಗಿ ವೈಟ್‌ಫೀಲ್ಡ್‌ಗೆ ಸುಮಾರು 16 ಕಿಲೋಮೀಟರ್ ಅಂತರ ಕ್ರಮಿಸಲು ಒಂದೂವರೆ ಗಂಟೆ ತಗಲುತ್ತದೆ. ಗೋಪಾಲನ್ ಸಿನಿಮಾಸ್‌ನಿಂದ ಗರುಡಾಚಾರ್ ಪಾಳ್ಯದ ನಡುವಿನ 5.2 ಕಿಲೋಮೀಟರ್ ಅಂತರ ಕ್ರಮಿಸಲು 35 ನಿಮಿಷ ಬೇಕಾಗುತ್ತದೆ.
‘ದಟ್ಟಣೆಯ ಮಧ್ಯೆ ನಿಂತಾಗ ವಾಹನಗಳ ಹೊಗೆ ನೇರ ಸೇವಿಸಬೇಕಾದ ಅನಿವಾರ್ಯ ದ್ವಿಚಕ್ರ ವಾಹನ ಸವಾರರದ್ದು’ ಎಂದು ಇಲ್ಲಿನ ನಿವಾಸಿ ವೆಂಕಟೇಶ್ ಸಮಸ್ಯೆ ತೆರೆದಿಟ್ಟರು.
ವಾಹನಗಳ ಹೊಗೆ ಮತ್ತು ಕಾಮಗಾರಿಯ ದೂಳು ಗೋಚರವಾಗುತ್ತದೆ. ಆದರೆ, ವೈಟ್‌ಫೀಲ್ಡ್ ಸುತ್ತಮುತ್ತಲಿನ ಕೈಗಾರಿಕೆಗಳಿಂದ ಹೊಮ್ಮುವ ಹೊಗೆ ಅಗೋಚರವಾಗಿಯೇ ದೇಹವನ್ನು ಸೇರುತ್ತದೆ. ಎಲ್ಲವೂ ಗೊತ್ತಿದ್ದೂ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮದು ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಸಂಚಾರ ಪೊಲೀಸರ ಗೋಳು
‘ಒಮ್ಮೆ ಸಿಗ್ನಲ್ ಬಿತ್ತೆಂದರೆ ಕನಿಷ್ಠ 500ರಷ್ಟು ವಾಹನಗಳು ಒಂದೆಡೆ ಜಮಾವಣೆಗೊಳ್ಳುತ್ತವೆ. ದಟ್ಟಣೆಯ ಅವಧಿಯಲ್ಲಿ ಈ ಪ್ರಮಾಣ ಮೂರು ಪಟ್ಟು ಹೆಚ್ಚುತ್ತದೆ. ಸಿಗ್ನಲ್‌ಮುಕ್ತ 40 ಸೆಕೆಂಡ್‌ಗಳಲ್ಲಿ ಈ ವಾಹನಗಳ ಪೈಕಿ ಅರ್ಧದಷ್ಟು ಮಾತ್ರ ಮುಂದಕ್ಕೆ ಸಂಚರಿಸುತ್ತವೆ. ಮತ್ತೆ ಅಷ್ಟೇ ಪ್ರಮಾಣದ ವಾಹನಗಳು ಬಂದು ಸೇರುತ್ತವೆ. ಹೀಗಾಗಿ ಇದು ಮುಗಿಯದ ಗೋಳು. ದೂಳಿನಿಂದಾಗಿ ಸಂಜೆ ವೇಳೆ ನಮ್ಮ ಸಮವಸ್ತ್ರವೂ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಣ್ಣುರಿ, ತಲೆನೋವು ಸಮಸ್ಯೆ ನಮಗೆ ನಿತ್ಯದ ಗೋಳು’ ಎಂದು ಕೆ.ಆರ್.ಪುರ ಸೇತುವೆ ಬಳಿ ಕರ್ತವ್ಯ ನಿವರ್ಹಿಸುತ್ತಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.
ದೂಳಿನ ಪ್ರಮಾಣ ಅಳೆಯಲು ಸೂಚನೆ
ವೈಟ್‌ಫೀಲ್ಡ್, ಕೆ.ಆರ್.ಪುರ ಪ್ರದೇಶದಲ್ಲಿ ಮಾಲಿನ್ಯ ಸಮಸ್ಯೆ ತೀವ್ರವಾಗಿರುವುದು ನಿಜ. ಕಾಮಗಾರಿ ನಡೆಸುವವರು ಈ ಪ್ರದೇಶದಲ್ಲಿ ತಕ್ಷಣದ ಪರಿಹಾರವಾಗಿ ನೀರು ಚಿಮುಕಿಸುವ ಮೂಲಕ ದೂಳಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ದೂಳಿನ ಪ್ರಮಾಣ ಅಳೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು 3 ದಿನಗಳಲ್ಲಿ ಆ ವರದಿ ಬರಲಿದೆ. ಬಳಿಕ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವ ಮಾರ್ಗ ಕಂಡುಕೊಳ್ಳಬಹುದು.
- ಲಕ್ಷ್ಮಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
* ಫುಟ್‌ಪಾತ್ ಇಲ್ಲದ ಕಾರಣ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲೇ ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗುತ್ತಿದೆ
–ಶ್ರೀನಾಥ್, ಸ್ಥಳೀಯ ನಿವಾಸಿ
* ಶಾಲಾ ಮಕ್ಕಳು, ಪೋಷಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ದೂಳು ಸೇವಿಸಿ ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಹೆಚ್ಚು ದೂಳು ಇರುವ ಕಡೆ ನೀರು ಸಿಂಪಡಿಸಬೇಕು.
- ಹರಿಕೃಷ್ಣ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.