ADVERTISEMENT

18 ರಸ್ತೆಗಳ ವೈಟ್‌ ಟಾಪಿಂಗ್‌: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 16:07 IST
Last Updated 7 ನವೆಂಬರ್ 2024, 16:07 IST
ತುಷಾರ್‌ ಗಿರಿನಾಥ್‌
ತುಷಾರ್‌ ಗಿರಿನಾಥ್‌   

ಬೆಂಗಳೂರು: ನಗರದ 18 ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 16 ಪ್ಯಾಕೇಜ್‌ಗಳನ್ನು ಮಾಡಿಕೊಳ್ಳಲಾಗಿದ್ದು, ನೂರಕ್ಕೂ ಅಧಿಕ ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಮಾಡಲು ನಿರ್ಧರಿಸಲಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿರುವುದರಿಂದ ಸಂಚಾರ ಪೊಲೀಸರ ಅನುಮತಿ ಕೇಳಲಾಗಿತ್ತು. ಅವರು 48 ಕಾಮಗಾರಿಗಳನ್ನು ಆರಂಭಿಸಲು ಅನುಮತಿ ನೀಡಿದ್ದರು. ಬಳಿಕ ಒಳಚರಂಡಿ ಮಂಡಳಿಯ ಒಪ್ಪಿಗೆ ಕೇಳಿದಾಗ ಅವರು ಆರಂಭಿಕ ಹಂತವಾಗಿ 18 ರಸ್ತೆಗಳಲ್ಲಿ ಮಾತ್ರ ಕಾಮಗಾರಿ ಹಮ್ಮಿಕೊಳ್ಳಲು ಅನುಮತಿ ನೀಡಿತ್ತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ವಿದ್ಯುತ್‌ ಕೇಬಲ್‌ ಅಳವಡಿಸುವ ಕಾರ್ಯ ಸಹಿತ ಸಂಬಂಧಪಟ್ಟ ಎಲ್ಲರಿಗೂ ಅವಕಾಶ ನೀಡಿಯೇ ವೈಟ್‌ ಟಾಪಿಂಗ್‌ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ. ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಿರುವುದರಿಂದ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿಗೆ ಅನನುಕೂಲ ಆಗಬಹುದು ಎಂದು ಹೇಳಿದರು.

ADVERTISEMENT

‘ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಪತ್ರ ಬರೆಯುವ ಅಭಿಯಾನ ನಡೆಸುತ್ತಿದ್ದಾರೆ. ರಸ್ತೆ ಗುಂಡಿ ಬಿದ್ದಿದೆ. ಕಸ ಬಿದ್ದಿದೆ. ಬೀದಿ ದೀಪ ಉರಿಯುತ್ತಿಲ್ಲ ಎಂದೆಲ್ಲ ಸಮಸ್ಯೆ ಬಿಚ್ಚಿಡುತ್ತಿದ್ದಾರೆ. ಸಮಸ್ಯೆಗಳಿಗೆ ದೀರ್ಘ ಕಾಲದ ಪರಿಹಾರ ಕಂಡುಕೊಳ್ಳಲು ಪ್ರಯತ್ನಪಡುತ್ತಿದ್ದೇವೆ. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಆಗುವವರೆಗೆ ಕಸದ ಸಮಸ್ಯೆ ಇತ್ಯರ್ಥವಾಗದು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆರ್.ಆರ್. ನಗರ ವಲಯದಲ್ಲಿ ನ.8ರಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮ ನಡೆಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಾಗೂ ವಲಯ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆರ್.ಆರ್. ನಗರ ವಲಯ ಯಶವಂತಪುರದ ಎಂಇಐ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್‌ ಕಾಮಗಾರಿಯನ್ನು ಬೆಳಿಗ್ಗೆ 10ಕ್ಕೆ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 3ರಿಂದ ಆರ್.ಆರ್ ನಗರ ವಲಯ  ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.