ADVERTISEMENT

ಬಾಡಿಗೆಗೆ ಖಾಸಗಿ ವಾಹನ ಬಳಕೆ

ವಾಣಿಜ್ಯ ವಾಹನ ಚಾಲಕ, ಮಾಲೀಕರ ದುಡಿಮೆಗೆ ಹೊಡೆತ

ಬಾಲಕೃಷ್ಣ ಪಿ.ಎಚ್‌
Published 27 ಅಕ್ಟೋಬರ್ 2024, 20:26 IST
Last Updated 27 ಅಕ್ಟೋಬರ್ 2024, 20:26 IST
ಬಿಳಿ ನಂಬರ್‌ಪ್ಲೇಟ್‌ ಹೊಂದಿರುವ ವಾಹನ
ಬಿಳಿ ನಂಬರ್‌ಪ್ಲೇಟ್‌ ಹೊಂದಿರುವ ವಾಹನ   

ಬೆಂಗಳೂರು: ಖಾಸಗಿ ಬಳಕೆಗೆ ಎಂದು ಖರೀದಿಸಿದ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪ್ರಯಾಣಿಕರನ್ನು ಒಯ್ಯಲು ಬಳಸುವವರ ಪ್ರಮಾಣ ಜಾಸ್ತಿಯಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವುದರ ಜೊತೆಗೆ ವಾಣಿಜ್ಯ ವಾಹನಗಳಲ್ಲಿ ದುಡಿಮೆಯನ್ನೇ ನಂಬಿ ಬದುಕುತ್ತಿರುವವರಿಗೆ ಹೊಡೆತ ನೀಡಿದೆ.

ವಾಣಿಜ್ಯ ವಾಹನಗಳಿಗೆ ಮಾಲೀಕರು ಅಧಿಕ ತೆರಿಗೆ ಪಾವತಿ ಮಾಡಬೇಕು. ಅವು ಹಳದಿ ಬಣ್ಣದ ನಂಬರ್‌ ಪ್ಲೇಟ್‌ ಹೊಂದಿರುತ್ತವೆ. ಸ್ವಂತಕ್ಕೆ ಬಳಸುವ ವಾಹನಗಳಿಗೆ ತೆರಿಗೆ ಕಡಿಮೆ ಇರುತ್ತದೆ. ಈ ವಾಹನಗಳು ಬಿಳಿ ಬಣ್ಣದ ನಂಬರ್‌ಪ್ಲೇಟ್‌ ಹೊಂದಿರುತ್ತವೆ. ತೆರಿಗೆ ತಪ್ಪಿಸಲು ಸ್ವಂತ ಬಳಕೆಯ ವಾಹನಗಳನ್ನು ಖರೀದಿಸಿ ಅದನ್ನು ವಾಣಿಜ್ಯ ವಾಹನಗಳಂತೆ ಬಳಸುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ.

‘ಬೆಂಗಳೂರಿನಲ್ಲಿಯೇ ಸಾವಿರಾರು ಖಾಸಗಿ ವಾಹನಗಳನ್ನು ನಿಯಮ ಉಲ್ಲಂಘಿಸಿ ಬಾಡಿಗೆ ಸೇವೆ ಒದಗಿಸಲು ಬಳಸಲಾಗುತ್ತಿದೆ. ಹಲವು ಆ್ಯಪ್‌ ಮೂಲಕ ಬುಕ್ಕಿಂಗ್ ಮಾಡಿಸಿಕೊಳ್ಳಲಾಗುತ್ತಿದೆ. ಕೆಲವು ಆ್ಯಪ್‌ಗಳನ್ನು ನಿಷೇಧಿಸಿದರೂ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಐಟಿ–ಬಿಟಿ ಕಂಪನಿಗಳಲ್ಲಿ ‘ಕಾರ್‌ ಪೂಲಿಂಗ್‌’ ಮೂಲಕ ವಾಹನಗಳನ್ನು ವಾಣಿಜ್ಯ ಸಂಚಾರಕ್ಕೆ ಬಳಕೆ ಮಾಡಲಾಗುತ್ತಿದೆ’ ಎಂದು ವಾಣಿಜ್ಯ ವಾಹನಗಳ ಚಾಲಕರು ದೂರಿದರು.

ADVERTISEMENT

‘ಸ್ವಂತ ಬಳಕೆಯ ವಾಹನಗಳನ್ನು ಬಾಡಿಗೆಗೆ ಬಳಸುವುದರಿಂದ ವಾಣಿಜ್ಯ ಸಾರಿಗೆ ಸಂಚಾರದ ವಾಹನಗಳನ್ನು ಹೊಂದಿರುವ ನಮಗೆ ಶೇ 60ರಷ್ಟು ಹೊಡೆತ ಬಿದ್ದಿದೆ. ಸಾರಿಗೆ ಇಲಾಖೆ ಈ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಒಂದಾದ ಮೇಲೆ ಒಂದು ಆ್ಯಪ್‌ಗಳು ಹುಟ್ಟಿಕೊಳ್ಳುತ್ತಲೇ ಇವೆ’ ಎಂದು ಬೃಹತ್‌ ಬೆಂಗಳೂರು ಟ್ಯಾಕ್ಸಿ ಡ್ರೈವರ್‌ ಯೂನಿಯನ್‌ ಅಧ್ಯಕ್ಷ ಅಶ್ವಥ್‌ ಪಿ. ಅಸಮಾಧಾನ ವ್ಯಕ್ತಪಡಿಸಿದರು.

‘ಕದ್ದುಮುಚ್ಚಿ ಕೆಲವು ವಾಹನಗಳ ಮಾಲೀಕರು ವಾಣಿಜ್ಯ ಸಂಚಾರ ನಡೆಸುತ್ತಿದ್ದಾರೆ. ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ಕಾರ್ಯಾಚರಿಸುತ್ತಿದ್ದಾರೆ. ಬೆಂಗಳೂರಿನ ಚಲನಚಿತ್ರ ವಾಹನ ಚಾಲಕರ ಸಂಘದಲ್ಲಿ ಹಳದಿ ನಂಬರ್‌ ಪ್ಲೇಟ್‌ ಹೊಂದಿರುವ ಐದಾರು ವಾಹನಗಳಷ್ಟೇ ಇವೆ. 75 ಟ್ಯಾಕ್ಸಿಗಳು ಬಿಳಿ ನಂಬರ್‌ಪ್ಲೇಟ್‌ ಹೊಂದಿವೆ. ಇದಲ್ಲದೇ ಸಂಘದಲ್ಲಿ ಇಲ್ಲದ 50ಕ್ಕೂ ಅಧಿಕ ಸ್ವಂತ  ವಾಹನಗಳನ್ನು ಬಾಡಿಗೆಗೆ ಸಂಚಾರಕ್ಕೆ ಬಳಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಆರ್ಗನೈಸೇಶನ್‌ ಸದಸ್ಯ ರಮೇಶ್‌ ಸಿ. ದೂರಿದರು.

‘ಇತ್ತೀಚೆಗೆ ಇದೇ ರೀತಿ ಬಾಡಿಗೆ ಮಾಡಿದ್ದ ವಾಹನದ ಬಗ್ಗೆ ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದೆ. ಆರ್‌ಟಿಒ ಬಂದು ವಾಹನವನ್ನು ವಶಕ್ಕೆ ಪಡೆದಿದ್ದರು. ಅದರ ಚಾಲಕ ಜೀವಬೆದರಿಕೆ ಒಡ್ಡಿದ್ದರು. ಚಲನಚಿತ್ರ ವಾಹನ ಚಾಲಕರ ಸಂಘದ ಅಧ್ಯಕ್ಷರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ಕೂಡ ನೀಡಿದ್ದೆ. ಆದರೂ ಖಾಸಗಿ ವಾಹನಗಳನ್ನು ಬಾಡಿಗೆಗೆ ಸಂಚರಿಸುವುದು ನಿಯಂತ್ರಣವಾಗಿಲ್ಲ’ ಎಂದು ರಮೇಶ್‌ ತಿಳಿಸಿದರು.

‘ವಾಣಿಜ್ಯ ಸಂಚಾರದ ವಾಹನಗಳನ್ನೇ ನಂಬಿದ ನಮ್ಮಂಥವರ ಹೊಟ್ಟೆಗೆ ಹೊಡೆಯುವ ಇಂಥ ವಾಹನಗಳ ಮೇಲೆ ಸಾರಿಗೆ ಸಚಿವರು, ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂಬುದು ಅವರ ಆಗ್ರಹವಾಗಿದೆ.

‘ಶೀಘ್ರ ಮಾರ್ಗದರ್ಶಿ ಸೂತ್ರ’

‘ಸ್ವಂತ ವಾಹನಗಳು ಬಾಡಿಗೆ ಆಧಾರದಲ್ಲಿ ಸಂಚರಿಸುವಾಗ ಸಿಕ್ಕಿಬಿದ್ದರೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಬಹಳ ಬಾರಿ ಎಲ್ಲಿಯೋ ನಿಲ್ಲಿಸಿರುತ್ತಾರೆ. ಚಾಲಕನೂ ಇರುವುದಿಲ್ಲ. ಇದ್ದರೂ ಬಾಡಿಗೆ ಆಧಾರದಲ್ಲಿ ಬಂದಿರುವುದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕಾಗಿ ಮಾರ್ಗದರ್ಶಿ ಸೂತ್ರ ತಯಾರಿಸಲಾಗುವುದು. ಅದನ್ನು ಮೀರುವ ಸ್ವಂತ ಬಳಕೆ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಾಡಿಗೆಗೆ ಸಂಚರಿಸಿದರೆ ನೋಟಿಸ್‌

‘ಖಾಸಗಿ ಬಳಕೆಯ ವಾಹನಗಳನ್ನು ವಾಣಿಜ್ಯ ಸಂಚಾರಕ್ಕೆ ಬಳಸಿದ್ದು ಕಂಡು ಬಂದರೆ ಅಂಥ ವಾಹನಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು. ಅವರ ಚಾಲನಾ ಪರವಾನಗಿ ಪತ್ರ ಮತ್ತು ವಾಹನದ ನೋಂದಣಿ ಪ್ರಮಾಣಪತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.