ಬೆಂಗಳೂರು: ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ದೂರುದಾರನಿಂದಲೇ ₹ 25,000 ಲಂಚ ಪಡೆಯುತ್ತಿದ್ದ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಗಂಗಾಧರಯ್ಯ ಎಂ.ಆರ್. ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ವರ್ತೂರು ಸಮೀಪದ ಮುತ್ತಸಂದ್ರ ನಿವಾಸಿ ಅಂಬರೀಷ್ ಎಂಬುವವರ ಮೇಲೆ ಅಕ್ಟೋಬರ್ 24ರಂದು ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇತರರ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಆರೋಪಿಗಳನ್ನು ಬಂಧಿಸುವಂತೆ ದೂರುದಾರ ಅಂಬರೀಷ್ ಪಿಎಸ್‌ಐ ಬಳಿ ಒತ್ತಾಯಿಸಿದ್ದರು. ಆರೋಪಿಗಳು ಜಾಮೀನು ಪಡೆದಿರುವುದನ್ನು ಮುಚ್ಚಿಟ್ಟಿದ್ದ ಪಿಎಸ್‌ಐ, ಎಲ್ಲರನ್ನೂ ಬಂಧಿಸಬೇಕಾದರೆ ₹ 50,000 ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆಸಿದಾಗ ₹ 25,000 ಕೊಟ್ಟರೆ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದರು.
ಪಿಎಸ್‌ಐ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಅಂಬರೀಷ್ ಅವರು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ–1ಕ್ಕೆ ದೂರು ಸಲ್ಲಿಸಿದ್ದರು. ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಬಂದು ಹಣ ತಲುಪಿಸುವಂತೆ ಆರೋಪಿ ಸೂಚಿಸಿದ್ದರು. ಅದರಂತೆ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಗಂಗಾಧರಯ್ಯ ಅವರನ್ನು ಭೇಟಿಮಾಡಿದ ಅಂಬರೀಷ್ ಹಣ ನೀಡಿದರು. ಗಂಗಾಧರಯ್ಯ ಹಣ ಪಡೆದುಕೊಳ್ಳುತ್ತಿದ್ದಂತೆ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಆರೋಪಿಯನ್ನು ಬಂಧಿಸಿದರು ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ–1ರ ಎಸ್‌ಪಿ ಶ್ರೀನಾಥ್ ಜೋಶಿ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ವಸಂತ್ ಸಿ. ಮೇಲುಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಪುಟ್ಟ ಓಬಳರೆಡ್ಡಿ, ಶ್ರೀಕಾಂತ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.