ADVERTISEMENT

ತಮಿಳುನಾಡಿನ ಹೊಸೂರಿಗೇಕೆ ‘ನಮ್ಮ ಮೆಟ್ರೊ’? ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 8:00 IST
Last Updated 10 ಜೂನ್ 2022, 8:00 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ    

ಬೆಂಗಳೂರು: ನಮ್ಮ ಮೆಟ್ರೊ 2ನೇ ಹಂತದ ಆರ್.ವಿ.ರಸ್ತೆ–ಬೊಮ್ಮಸಂದ್ರ(ರೀಚ್– 5) ಮಾರ್ಗವನ್ನು ಹೊಸೂರು ತನಕ ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಬೆಂಗಳೂರಿನ ಮಗ್ಗುಲಲ್ಲೇ ಇರುವ, ಔದ್ಯಮಿಕವಾಗಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ತಮಿಳುನಾಡಿನ ಹೊಸೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸಿದರೆ, ರಾಜ್ಯಕ್ಕೆ ದಕ್ಕಬೇಕಾದ ಕೈಗಾರಿಕೆಗಳು, ಉದ್ದಿಮೆಗಳು ಹೊಸೂರಿಗೆ ಸ್ಥಳಾಂತರಗೊಳ್ಳಲಿವೆ ಎಂಬ ಆತಂಕ ವ್ಯಕ್ತವಾಗಿದೆ.

ಇದರ ಬದಲಿಗೆ ಬೆಂಗಳೂರು ಹೊರವಲಯದ ನಗರಗಳಾದ ಹೊಸಕೋಟೆ, ದಾಬಸ್‌ಪೇಟೆ, ದೊಡ್ಡಬಳ್ಳಾಪುರಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವಂತೆ ಆಗ್ರಹಗಳು ಕೇಳಿಬಂದಿವೆ.

ADVERTISEMENT

ಹೊಸೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸುವುದನ್ನು ಕರ್ನಾಟಕದ ಪ್ರತಿಪಕ್ಷಗಳು ವಿರೋಧಿಸಬೇಕು. ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿರುವ ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿಗೆ ಮೆಟ್ರೊ ಕಲ್ಪಿಸಲು ಆಗ್ರಹಿಸಬೇಕು ಎಂದು ಟ್ವಿಟರ್‌ ಬಳಕೆದಾರ ರೋಹಿತ್‌ ಸಿಂಹ ಎಂಬುವವರು ಆಗ್ರಹಿಸಿದ್ದಾರೆ.

ಕರ್ನಾಟಕದ ಗಡಿಯಿಂದ ಹೊಸೂರು 10 ಕಿ.ಮೀ ದೂರದಲ್ಲಿದೆ. ಹೊಸೂರಿನಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಆಕರ್ಷಿಸಲು ತಮಿಳುನಾಡಿಗೆ ನಮ್ಮ ಮೆಟ್ರೊ ನೆರವಾಗಲಿದೆ. ಅಲ್ಲಿನ ರಿಯಲ್‌ಎಸ್ಟೇಟ್‌ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಹಾಯವಾಗಲಿದೆ. ಮೆಟ್ರೊವನ್ನು ಹೊಸೂರಿಗೆ ವಿಸ್ತರಿಸುವುದು ಕನ್ನಡಿಗ ಅಥವಾ ಕರ್ನಾಟಕಕ್ಕೆ ಹೇಗೆ ಸಹಾಯ ಆಗಲಿದೆ ಇದಕ್ಕೆ ಉತ್ತರ ಸಿಗಬಹುದೇ? ಎಂದು ಜೆಡಿಎಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಪ್ರತಾಪ್‌ ಕಣಗಾಲ್‌ ಅವರು ಪ್ರಶ್ನೆ ಮಾಡಿದ್ದಾರೆ.

ಹೊಸೂರು ಔದ್ಯಮಿಕವಾಗಿ ಅಭಿವೃದ್ಧಿಹೊಂದಿದ್ದರೂ, ಬೆಂಗಳೂರನ್ನು ಬಹುವಾಗಿ ಅವಲಂಬಿಸಿದೆ. ಹೀಗಾಗಿ ಬೆಂಗಳೂರಿಗೂ ಇದರಿಂದ ಲಾಭವಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ಭಾಷಿಕರನ್ನು ಓಲೈಸಲು ಬಿಜೆಪಿ ಮಾಡಿರುವ ತಂತ್ರ ಇದು ಎಂಬ ವಾದವೂ ಕೇಳಿ ಬಂದಿದೆ.

ಕೇಂದ್ರಕ್ಕೆ ಬಿಎಂಆರ್‌ಸಿಎಲ್‌ ಎಂಡಿ ಪತ್ರ

‘ಬೊಮ್ಮಸಂದ್ರದಿಂದ ಹೊಸೂರು ನಡುವಿನ ಮೆಟ್ರೊ ರೈಲು ಮಾರ್ಗ ವಿಸ್ತರಿಸುವ ಸಂಬಂಧ ತಮಿಳುನಾಡು ಸರ್ಕಾರ ಅಧ್ಯಯನ ನಡೆಸಬಹುದು’ ಎಂದು ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ವಿಷಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ(ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ಮೇ 23ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣ ಆಗಬೇಕು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ 11.7 ಕಿಲೋ ಮೀಟರ್ ಇ‌ದೆ. ಉಳಿದ 8.8 ಕಿಲೋ ಮೀಟರ್‌ ಮಾರ್ಗ ರಾಜ್ಯದ ಗಡಿ ದಾಟಿ ನಿರ್ಮಾಣ ಆಗಬೇಕಿದೆ. 2017ರ ಮೆಟ್ರೊ ರೈಲು ನೀತಿ ಪ್ರಕಾರ ನೆರೆಯ ರಾಜ್ಯ ಅಧ್ಯಯನ ಕೈಗೊಳ್ಳುವುದು ಸೂಕ್ತ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಯೋಜನೆಗೆ ತಗಲುವ ವೆಚ್ಚವನ್ನು ಎರಡೂ ಸರ್ಕಾರಗಳು ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲೂ ಸಮನ್ವಯದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೊಸೂರಿನಲ್ಲಿ ₹3 ಲಕ್ಷ ಕೋಟಿಯಿಂದ ₹3.5 ಲಕ್ಷ ಕೋಟಿ ವರೆಗೆ ಆರ್ಥಿಕತೆ ಸೃಷ್ಟಿಯಾಗಿದೆ. 3,000 ಸಾವಿರದಷ್ಟು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಇಲ್ಲಿ ತಲೆಎತ್ತಿವೆ. ಅಲ್ಲದೆ, ಜಗತ್ತಿನಲ್ಲಿ ಅತಿವೇಗವಾಗಿ ಜನಸಂಖ್ಯೆ ಹೆಚ್ಚುತ್ತಿರುವ ನಗರಗಳ ಪೈಕಿ ಹೊಸೂರು 13ನೇ ಸ್ಥಾನದಲ್ಲಿದೆ. ಇದರ ಜೊತೆಗೆ, ಜೀವನ ನಿರ್ವಹಣಾ ವೆಚ್ಚವೂ ಹೊಸೂರಿನಲ್ಲಿ ಕಡಿಮೆ ಇದ್ದು, ಅಭಿವೃದ್ಧಿಗೆ ಪೂರಕ ವಾತಾವರಣ ಹೊಂದಿದೆ.

ಹೊಸೂರಿನಲ್ಲಿರುವ ಪ್ರಮುಖ ಕಂಪನಿಗಳು

ಟೈಟನ್‌, ಟಿವಿಎಸ್‌ ಮೋಟಾರ್‌ ಕಂಪನಿ, ಅಶೋಕ ಲೈಲೆಂಡ್‌, ಕ್ಯಾಟರ್‌ಪಿಲ್ಲರ್‌, ಜನರಲ್‌ ಎಲೆಕ್ಟ್ರಿಕಲ್ಸ್‌, ಕಾನ್ಸೈ ನೇರೊಲ್ಯಾಕ್‌ ಪೇಂಟ್ಸ್‌, ಪ್ರೆಸ್ಟೀಜ್‌ ಕಂಪನಿಗಳು ಹೊಸೂರಿನಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.