ADVERTISEMENT

BBMP | ಪಾಲಿಕೆ ಚುನಾವಣೆ: ಯಾಕೀ ತಾತ್ಸಾರ?

ಆರ್. ಮಂಜುನಾಥ್
Published 14 ಜೂನ್ 2024, 23:44 IST
Last Updated 14 ಜೂನ್ 2024, 23:44 IST
BBMP
BBMP    

ಬೆಂಗಳೂರು: ಪಾಲಿಕೆಯನ್ನು ಎಷ್ಟಾದರೂ, ಹೇಗಾದರೂ ವಿಭಜನೆ ಮಾಡಿಕೊಳ್ಳಿ. ಆದರೆ ಅದಕ್ಕೆ ಮುನ್ನ, ಸಂವಿಧಾನದ ಆಶಯವನ್ನು ಉಳಿಸಿಕೊಳ್ಳಲು ಚುನಾವಣೆ ಮಾಡಿ. ಶಾಸಕರಾಗಲು, ಸಂಸದರಾಗಲು ಯಾವುದೇ ವಿಳಂಬ ಮಾಡುವುದಿಲ್ಲ. ಕಾಲಕ್ಕೆ ತಕ್ಕಂತೆ ಚುನಾವಣೆ ಮಾಡಿಕೊಳ್ಳುತ್ತೀರಿ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ತಾತ್ಸಾರ ಏಕೆ...

ಪಾಲಿಕೆಯ ಮಾಜಿ ಮೇಯರ್‌ಗಳ ಅಭಿಪ್ರಾಯ, ಪ್ರಶ್ನೆಗಳಿವು.

‘ಸಂವಿಧಾನದಂತೆ ವಿಧಾನಸಭೆ, ಲೋಕಸಭೆಗೆ ಚುನಾವಣೆಗಳು ಕಾಲಕಾಲಕ್ಕೆ ನಡೆಯುತ್ತಿವೆ. ಇದರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು, ಅದೇ ಸಂವಿಧಾನದಲ್ಲಿ ಹೇಳಿರುವಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ಮುಂದೂಡುತ್ತಲೇ ಬಂದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಲಾಗುತ್ತಿರುವ ಅಪಮಾನ’ ಎಂದು ಹೇಳಿದ್ದಾರೆ.

ADVERTISEMENT

‘ಬೃಹತ್‌ ಬೆಂಗಳೂರನ್ನು ಆಡಳಿತಾತ್ಮಕವಾಗಿ ವಿಭಾಗ ಮಾಡಿದರೆ ಒಳ್ಳೆಯದು. ನಾಲ್ಕೈದು ಪಾಲಿಕೆ ಎಂದು ಪ್ರತ್ಯೇಕಗೊಳಿಸಿದರೆ ಪರಸ್ಪರ ಸಮನ್ವಯ ಸಾಧಿಸಲು ಸಾಧ್ಯವಾಗುವುದಿಲ್ಲ. ಒಂದು ಬೃಹತ್‌ ರಸ್ತೆ ಮೂರು ಪಾಲಿಕೆಗಳ ನಡುವೆ ಸಾಗಿದರೆ, ಅದರ ಗುಣಮಟ್ಟ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಇದೊಂದು ಉದಾಹರಣೆ ಅಷ್ಟೆ. ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ತೊಂದರೆಯಾಗುತ್ತದೆ. ಇದನ್ನು ಒಟ್ಟುಗೂಡಿಸಿ, ಒಂದು ವ್ಯವಸ್ಥೆ ರೂಪಿಸಿದರೆ ಉತ್ತಮವಾಗಬಹುದು. ಆದರೆ, ಇದೇ ನೆಪವೊಡ್ಡಿ ಚುನಾವಣೆಯನ್ನು ಮುಂದೂಡುವುದು ಸರಿಯಲ್ಲ’ ಎಂದು ಮಾಜಿ ಮೇಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲ ನೆಪ ನೀಡಿ, ಏನೇನೋ ಕಾನೂನು ತರಲು ಯೋಜಿಸುವ ಸರ್ಕಾರ, ನಗರಕ್ಕೆ ಮೇಯರ್‌ ನೇರ ಆಯ್ಕೆ ಅಥವಾ ಒಂದಕ್ಕಿಂತ ಹೆಚ್ಚು ವರ್ಷದ ಅಧಿಕಾರ ನೀಡುವ ಬಗ್ಗೆ ಮಾತ್ರ ಆಲೋಚಿಸುತ್ತಿಲ್ಲ. ನಗರದ ಪ್ರಥಮ ಪ್ರಜೆ ಬಗ್ಗೆ ಕಾಳಜಿಯೇ ಇಲ್ಲ ಎಂದು ದೂರಿದರು.

‘ಒಂದು ಕಸದ ಗುಡ್ಡೆ ಎತ್ತಲೂ ಸಾಧ್ಯವಿಲ್ಲ. ಅಧಿಕಾರಿಗಳು ಮಾತೇ ಕೇಳುವುದಿಲ್ಲ. ಬಸವಗುಡಿಯಲ್ಲಿ ರಾಜಕಾಲುವೆ ಕೆಲಸವನ್ನು ಸರಿಯಾಗಿ ಮಾಡದೆ ಕೆಲವು ಮನೆಗಳಿಗೆ ನೀರು ನುಗ್ಗಿ, ಅವರು ತೇಲುವಂತಾಗಿತ್ತು. ಅಧಿಕಾರಿಗಳಿಗೆ ಜನಪರ ಕಾಳಜಿ ಇಲ್ಲ. ಯಾವ ನಿಯಮಗಳನ್ನೂ ಪಾಲಿಸುತ್ತಿಲ್ಲ’ ಎಂದು ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಹೇಳಿದರು.

ವಾರ್ಡ್‌ ಪುನರ್‌ವಿಂಗಡಣೆ ಸಂವಿಧಾನ ಬಾಹಿರ: ‘ಸಂವಿಧಾನದ ಪ್ರಕಾರ, ಕಳೆದ ಜನಗಣತಿ ಆಧಾರದಲ್ಲಿ ವಾರ್ಡ್‌ಗಳ ಪುನರ್‌ವಿಂಗಡಣೆ ಮಾಡಬೇಕು. ಆದರೆ, ಈಗ 225 ವಾರ್ಡ್‌ಗಳನ್ನು 2011ರ ಜನಗಣತಿಯಂತೆ ಮಾಡದೆ, ‘ಪ್ರೊಜೆಕ್ಟೆಡ್‌ ಸೆನ್ಸಸ್‌’ ಪ್ರಕಾರ ಮಾಡಿದ್ದಾರೆ. ಇದು ಸಂವಿಧಾನಬಾಹಿರವಾಗಿದೆ ಎಂದು ಮಾಜಿ ಮೇಯರ್‌ ಪಿ.ಆರ್‌. ರಮೇಶ್‌ ಮಾಹಿತಿ ನೀಡಿದರು.

‘ಜನಗಣತಿ ಮಾಡದೆ ಇರುವುದು ಕೇಂದ್ರ ಸರ್ಕಾರದ ವೈಫಲ್ಯ. ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಇದನ್ನು ಸರಿಪಡಿಸಬೇಕಾಗಿತ್ತು. ಒಟ್ಟಿನಲ್ಲಿ ಬೆಂಗಳೂರನ್ನು ಲಂಗುಲಗಾಮಿಲ್ಲದೆ ಬೆಳೆಸಿಕೊಂಡು ಹೋಗುತ್ತಿದ್ದಾರೆ’ ಎಂದರು.

ಮಾಜಿ ಮೇಯರ್‌ಗಳು ಏನನ್ನುತ್ತಾರೆ?

‘ರಾಜೀವ್‌ಗಾಂಧಿ ಆಶಯಕ್ಕೆ ಧಕ್ಕೆ ಬೇಡ’
ರಾಜೀವ್‌ಗಾಂಧಿಯವರು ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ಒಂದೇ ದಿನವೂ ಖಾಲಿ ಇರಬಾರದು ಎಂದು ಸಂವಿಧಾನದಕ್ಕೆ ತಿದ್ದುಪಡಿ ಮಾಡಿ ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೆ ತಂದರು. ಅವರ ಆಶಯಕ್ಕೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರಗಳು ನಡೆದುಕೊಳ್ಳಬೇಕು. ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡರೂ ಚುನಾವಣೆ ನಡೆಸಲೇಬೇಕು ಇನ್ನಷ್ಟು ವಿಳಂಬ ಮಾಡಬಾರದು.
–ಎಂ. ರಾಮಚಂದ್ರಪ್ಪ
‘ಚುನಾವಣೆ ನಡೆದರಷ್ಟೇ ಪ್ರಜಾಪ್ರಭುತ್ವ’
ಪ್ರಜಾಪ್ರಭುತ್ವ ಇರಬೇಕೆಂದರೆ ಚುನಾವಣೆ ನಡೆಯಲೇಬೇಕು. ಚುನಾವಣೆ ನಡೆಸದೇ ಹೋದರೆ ಪ್ರಜಾಪ್ರಭುತ್ವ ಎಲ್ಲಿರುತ್ತದೆ? ಅಧಿಕಾರಿಗಳೇ ಯಾವತ್ತೂ ಅಧಿಕಾರವನ್ನು ನಡೆಸಬಾರದು. ಮಹಾತ್ಮ ಗಾಂಧಿ ನೆಹರೂ ಅವರ ಕಾಳಜಿಯೇ ಅದು. ಹಾಗಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಕಾಲಕ್ಕೆ ತಕ್ಕಂತೆ ನಡೆಸಲೇಬೇಕು
–ಕೆ. ಚಂದ್ರಶೇಖರ್‌
‘ದಾರಿ ತಪ್ಪಿಸುತ್ತಿರುವ ಅಧಿಕಾರಿಗಳು’
ಬಿಬಿಎಂಪಿಯಲ್ಲಿ ಅಧಿಕಾರಿಗಳ ದರ್ಪ ಹೆಚ್ಚಾಗಿದೆ. ಜನಪ್ರತಿನಿಧಿಗಳು ಸಚಿವರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಆದಿಯಾಗಿ ಯಾರಿಗೂ ನಗರದ ಆಡಳಿತದ ಮೇಲೆ ನಿಯಂತ್ರಣವಿಲ್ಲ. ಹಿಂದಿನ ತಪ್ಪುಗಳಿಂದ ನಗರದ ಜನತೆಗೆ ಅನುಕೂಲವಾಗುವ ಯಾವ ಕೆಲಸಗಳೂ ನಡೆಯುತ್ತಿಲ್ಲ. ಬಿಬಿಎಂಪಿಗೆ ಮೊದಲು ಚುನಾವಣೆ ಮಾಡಬೇಕು. ನಂತರ ಯಾವುದೇ ರೀತಿಯ ವಿಭಜನೆ ಮಾಡಬಹುದು
–ಪಿ.ಆರ್‌. ರಮೇಶ್‌
‘ಅಧಿಕಾರ ನೀಡುವ ಮನಸ್ಸಿಲ್ಲ’
ಶಾಶ್ವತವಾಗಿ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದು ಶಾಸಕರು ಹಾಗೂ ಸಚಿವರು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುತ್ತಿಲ್ಲ. ಕಾರ್ಪೊರೇಟರ್‌ಗಳಿದ್ದರೆ ಸ್ಥಳೀಯ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತವೆ. ಒಬ್ಬರ ಮೇಲೆ ಇನ್ನೊಬ್ಬರು ಪರಸ್ಪರ ದೂರುತ್ತಾ ಚುನಾವಣೆ ಮುಂದೂಡುತ್ತಿದ್ದಾರೆ. ಇನ್ನು ಯಾವುದೇ ರೀತಿಯಲ್ಲೂ ಬಿಬಿಎಂಪಿಯನ್ನು ವಿಭಜನೆ ಮಾಡಬಾರದು. ಬೆಂಗಳೂರಿನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು
–ಎಸ್‌.ಕೆ. ನಟರಾಜ್‌
‘ಎಲ್ಲರೂ ಮುಂದೂಡುತ್ತಲೇ ಇದ್ದಾರೆ’
ಬಿಬಿಎಂಪಿಗೆ ಕಾಲಕಾಲಕ್ಕೆ ಚುನಾವಣೆ ಆಗಲೇಬೇಕು. ಅವಧಿ ಮುಗಿಯುವ ಆರು ತಿಂಗಳ ಮುನ್ನವೇ ಎಲ್ಲ ತಯಾರಿ ಆರಂಭವಾಗಬೇಕು ಎಂದು ರೂಲ್‌ ಬುಕ್‌ನಲ್ಲೇ ಇದೆ. ಆದರೆ ಎಲ್ಲ ಸರ್ಕಾರಗಳೂ ಅದನ್ನು ಪಾಲಿಸದೆ ಚುನಾವಣೆಯನ್ನು ಮುಂದೂಡುತ್ತಲೇ ಬಂದಿವೆ. ಬೇಕೆಂದೇ ಯಾವುದೋ ಕಾರಣ ನೀಡಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಇನ್ನು ನಾಲ್ಕೈದು ಬೆಂಗಳೂರು ಪಾಲಿಕೆ ಮಾಡುತ್ತೇವೆ ಎಂಬುದು ಚುನಾವಣೆ ಮುಂದೂಡುವ ತಂತ್ರವಷ್ಟೇ.
–ಕಟ್ಟೆ ಸತ್ಯನಾರಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.