ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು 2016-17ನೇ ಸಾಲಿನಿಂದ ಪರಿಷ್ಕರಿಸಲಾಗಿದೆ. ಆಗ ವಲಯ ವರ್ಗೀಕರಣವನ್ನೂ ನಡೆಸಲಾಗಿತ್ತು. ಆಗ ಆಸ್ತಿ ಇರುವ ವಲಯ ಗುರುತಿಸುವಾಗ ಆಗಿರುವ ಲೋಪವನ್ನು ಪತ್ತೆ ಹಚ್ಚಿರುವ ಬಿಬಿಎಂಪಿ ವ್ಯತ್ಯಾಸದ ಮೊತ್ತಕ್ಕೆ ದಂಡವನ್ನು ಬಡ್ಡಿ ಸಮೇತ ಪಾವತಿಸುವಂತೆ ಮಾಲೀಕರಿಗೆ ನೋಟೀಸ್ ಜಾರಿಗೊಳಿಸುತ್ತಿದೆ. ಪಾಳಿಕೆಯ ಈ ಕ್ರಮಕ್ಕೆ ಕಾಂಗ್ರೆಸ್ ಪಕ್ಷವು ಆಕ್ಷೇಪ ವ್ಯಕ್ತಪಡಿಸಿದೆ.
ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಮನವಿ ಸಲ್ಲಿಸಿರುವ ಕಾಂಗ್ರೆಸ್ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್ ವಾಜೀದ್, ‘ಆಸ್ತಿಯ ವರ್ಗೀಕರಣದ ಬಳಿಕ ವಲಯ ಗುರುತಿಸುವಲ್ಲಿ ಆಗಿರುವ ಲೋಪಕ್ಕೆ ಅದರ ಮಾಲೀಕರು ಕಾರಣರಲ್ಲ. ಅವರು ಮಾಡದ ತಪ್ಪಿಗೆ ನಾಲ್ಕು ವರ್ಷಗಳಿಗೆ ವಾರ್ಷಿಕ ಶೇ 24ರಂತೆ ದಂಡನಾ ಬಡ್ಡಿ ವಿಧಿಸಲಾಗುತ್ತಿದೆ. ಇದು ಸರಿಯಲ್ಲ. ಇದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.
‘ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳುವುದೂ ಸಮಂಜಸವಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಬಿಬಿಎಂಪಿಯು 2008-09ನೇ ಸಾಲಿನಲ್ಲಿ ಜಾರಿಗೆ ತಂದ ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್.ಎ.ಎಸ್) ನಿಯಮ 12(1)ರ ಪ್ರಕಾರ ಆಸ್ತಿ ತೆರಿಗೆಗೆ ಸಂಬಂಧಿಸಿದ ಆಯ್ದ ಅರ್ಜಿಗಳನ್ನು ಮಾತ್ರ ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳಬೇಕು. ಈ ನಿಯಮ ಗಾಳಿಗೆ ತೂರಿ ಲಕ್ಷಾಂತರ ಆಸ್ತಿಗಳ ಮಾಲೀಕರಿಗೆ ತೆರಿಗೆ ಪರಿಷ್ಕರಿಸಲಾಗಿದೆ’ ಎಂದು ಅವರು ದೂರಿದ್ದಾರೆ.
‘1976ರ ಕೆಎಂಸಿ ಕಾಯ್ದೆಯ ಸೆಕ್ಷನ್ 108 ಎ 13 (ಬಿ) ಹಾಗೂ 2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್ 144 (15) (ಬಿ) ಪ್ರಕಾರ ಅರ್ಜಿಗಳನ್ನು ಪರಿಶೀಲಿಸಿದ ನಂತರ ಪರಿಷ್ಕೃತ ತೆರಿಗೆ ಹಾಗೂ ಪಾವತಿಸಿರುವ ತೆರಿಗೆಯ ವ್ಯತ್ಯಾಸದ ಮೊತ್ತಕ್ಕೆ ಶೇ 2ರಷ್ಟು ದಂಡವನ್ನು ಮಾತ್ರ ವಿಧಿಸಬಹುದಾಗಿದೆ. ಆದೆ, ವ್ಯತ್ಯಾಸದ ಮೊತ್ತಕ್ಕೆ ವಾರ್ಷಿಕ ಶೇ 24 ರಷ್ಟು ಬಡ್ಡಿ ವಿಧಿಸಲಾಗಿದೆ. ಈ ದಂಡವನ್ನು ಪ್ರತಿ ವರ್ಷ ವಿಧಿಸಿರುವುದು ಕೂಡಾ ತಪ್ಪು’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘2008-09ರ ನಿಯಮಾವಳಿಯಂತೆ 'ಎಫ್' ವಲಯದಲ್ಲಿದ್ದ ಕೆಲವು ಆಸ್ತಿಗಳು 2016-17ರ ನಿಯಮಗಳ ಪ್ರಕಾರ ’ಡಿ' ವಲಯಕ್ಕೆ ಬಂದಿದ್ದವು.2016–17ರಲ್ಲಿ ಬಿಬಿಎಂಪಿಯು ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸದ ಕಾರಣ ಅನೇಕರು 'ಎಫ್' ವಲಯದ ದರದ ಪ್ರಕಾರ ತೆರಿಗೆ ಪಾವತಿಸಿದ್ದಾರೆ. ಇದರಲ್ಲಿ ಆಸ್ತಿ ಮಾಲೀಕರ ತಪ್ಪು ಇಲ್ಲ. ಅವರದಲ್ಲದ ತಪ್ಪಿಗೆ ದಂಡ ಬಡ್ಡಿ ವಿಧಿಸಿರುವುದು ನ್ಯಾಯ ಸಮ್ಮತವಲ್ಲ. ಈ ಅನ್ಯಾಯ ತಡೆಯಲು ಹೆಚ್ಚುವರಿಯಾಗಿ 'ಇ' ವಲಯವನ್ನು ಸೃಷ್ಟಿಸಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.
‘2021ರ ಫೆಬ್ರುವರಿಯಲ್ಲೇ ಬಿಬಿಎಂಪಿ ನೋಟೀಸ್ ಸಿದ್ಧಪಡಿಸಿದ್ದರೂ ಐದು ತಿಂಗಳು ತಡವಾಗಿ ಆಸ್ತಿ ಮಾಲೀಕರಿಗೆ ಜಾರಿ ಮಾಡಲಾಗುತ್ತಿದೆ. ತೆರಿಗೆ ಪಾವತಿ ವಿಳಂಬಕ್ಕೆ ತಿಂಗಳಿಗೆ ಶೇ 2 ರಷ್ಟು ಬಡ್ಡಿ ನೀಡುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ತಡವಾಗಿ ನೋಟೀಸ್ ಜಾರಿಗೊಳಿಸಿದ್ದಕ್ಕೆ ಅಧಿಕಾರಿಗಳು ಹೊಣೆಯೇ ಹೊರತು ತೆರಿಗೆದಾರರಲ್ಲ’ ಎಂದರು.
‘ಮಧ್ಯಮ ವರ್ಗಗಳ ಅನೇಕ ಕುಟುಂಬಗಳು ಮನೆ ಬಾಡಿಗೆಯಿಂದಲೇ ಜೀವನ ನಡೆಸುತ್ತಿದ್ದವು. ಕೋವಿಡ್ ಕಾಣಿಸಿಕೊಂಡ ಬಳಿಕ ನಗರದಲ್ಲಿ 3 ಲಕ್ಷದಷ್ಟು ಬಾಡಿಗೆ ಮನೆಗಳು ಖಾಲಿ ಇವೆ. ಕೆಲವು ಕಾರ್ಮಿಕರು, ಬಡ ವ್ಯಾಪಾರಸ್ಥರು ವರಮಾನವಿಲ್ಲದೇ ಮನೆ ಬಾಡಿಗೆಯನ್ನು ಪಾವತಿಸುತ್ತಿಲ್ಲ. ಇಂತಹ ಮನೆಗಳ ಮಾಲೀಕರಿಗೆ ಮನೆ ಬಾಡಿಗೆ ವರಮಾನವೂ ಇಲ್ಲ. ಅನೇಕ ಸಾರ್ವಜನಿಕರು ವಿವಿಧ ತೆರಿಗೆಗಳನ್ನು ಎರಡು ವರ್ಷಗಳ ಮಟ್ಟಿಗೆ ಮನ್ನಾ ಮಾಡುವಂತೆ ಸರ್ಕಾರವನ್ನೂ ಕೋರಿದ್ದಾರೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆಯ ಬಾಕಿ ಮೊತ್ತಕ್ಕೆ ದುಬಾರಿ ದಂಡ ವಿಧಿಸಿ ವಸೂಲಿ ಮಾಡುವುದನ್ನು ಕೈ ಬಿಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಅಹವಾಲು ಪರಿಶೀಲಿಸಿ ಕ್ರಮ’
‘2016–17ರಲ್ಲಿ ಆಸ್ತಿ ತೆರಿಗೆ ವಲಯಗಳ ಮರು ವರ್ಗೀಕರಣ ಸಂದರ್ಭದಲ್ಲಿ ‘ಸಿ’ ವಲಯದಲ್ಲಿದ್ದ ಕೆಲವು ಮನೆಗಳು ‘ಎ’ ವಲಯಕ್ಕೆ ಬಂದಿದ್ದವು. ಆದರೂ ಕೆಲವು ಮಾಲೀಕರು ಆಸ್ತಿ ಇರುವ ವಲಯವನ್ನು ತಪ್ಪಾಗಿ ಗುರುತಿಸಿದ್ದಾರೆ. ತೆರಿಗೆಯ ಪರಿಷ್ಕೃತ ದರವನ್ನು ಪಾವತಿಸಿಲ್ಲ. ಪರಿಶೀಲನೆ ನಡೆಸಿದಾಗ ಇಂತಹ ಅನೇಕ ಲೋಪಗಳು ಬೆಳಕಿಗೆ ಬಂದಿದೆ. ಈ ತಪ್ಪನ್ನು ಸರಿಪಡಿಸಲು ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಆಸ್ತಿ ಮಾಲೀಕರಿಗೆ ಹೊರೆ ಆಗುತ್ತಿದೆ ಎಂಬ ದೂರುಗಳು ಬಂದಿವೆ. ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.