ಬೆಂಗಳೂರು: ‘ಕಾಲ್ ಗರ್ಲ್ ಬೇಕಾದರೆ ಸಂಪರ್ಕಿಸಿ’ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪತ್ನಿ ಫೋಟೊ ಹಾಗೂ ಮೊಬೈಲ್ ನಂಬರ್ ಪೋಸ್ಟ್ ಮಾಡಿ ಪತಿ ಪರಾರಿಯಾಗಿದ್ದು, ಈ ಬಗ್ಗೆ ನಂದಿನಿ ಲೇಔಟ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.
‘ಪತಿ ಕಿರುಕುಳದಿಂದ ನೊಂದ ಪತ್ನಿ ದೂರು ನೀಡಿದ್ದಾರೆ. ಇದೊಂದು ಕೌಟುಂಬಿಕ ಜಗಳ. ಹೀಗಾಗಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ಮಹಿಳೆ ಹಾಗೂ ಆರೋಪಿ, 2019ರಲ್ಲಿ ಮದುವೆಯಾಗಿದ್ದಾರೆ. ಕೌಟುಂಬಿಕ ಜಗಳದಿಂದಾಗಿ ವರ್ಷದ ಹಿಂದೆಯಷ್ಟೇ ಅವರಿಬ್ಬರು ಬೇರೆಯಾಗಿದ್ದು, ಪ್ರತ್ಯೇಕವಾಗಿ ವಾಸವಿದ್ದಾರೆ. ಇದರ ನಡುವೆಯೇ ಅವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ಪತ್ನಿ ಫೋಟೊ ಅಪ್‌ಲೋಡ್ ಮಾಡಿದ್ದ. ಜೊತೆಗೆ, ಮೊಬೈಲ್ ನಂಬರ್ ಸಹ ನಮೂದಿಸಿದ್ದ. ‘ಯಾರಿಗಾದರೂ ಕಾಲ್‌ಗರ್ಲ್ ಬೇಕಾದರೆ ಸಂಪರ್ಕಿಸಿ’ ಎಂಬುದಾಗಿ ಪೋಸ್ಟ್ ಪ್ರಕಟಿಸಿದ್ದ. ಇದಾದ ನಂತರ, ಮಹಿಳೆಗೆ ಕರೆಗಳು ಬರಲಾರಂಭಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ, ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆ ಮೊಬೈಲ್ ನಂಬರ್ ಇರುವುದು ಗಮನಕ್ಕೆ ಬಂದಿತ್ತು. ಪತಿ ಕಿರುಕುಳದಿಂದ ಬೇಸತ್ತ ಮಹಿಳೆ, ಠಾಣೆಗೆ ದೂರು ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿರುವ ಪೋಸ್ಟ್ ಅಳಿಸಲು ಸಂಬಂಧಪಟ್ಟ ಕಂಪನಿಗಳಿಗೆ ಸೂಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
‘ದೂರು ದಾಖಲಾಗುತ್ತಿದ್ದಂತೆ ಪತಿ ಪರಾರಿಯಾಗಿದ್ದಾನೆ. ಈತ, ಹೊರ ದೇಶಕ್ಕೆ ಹೋಗಿರುವ ಮಾಹಿತಿ ಇದೆ. ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.