ADVERTISEMENT

ಬೆಂಗಳೂರು: ಪತಿ ಕೊಲೆಗೆ ಸುಪಾರಿ ನೀಡಿದ್ದ ಪತ್ನಿ

ಐವರು ಆರೋಪಿಗಳ ಬಂಧನ: ಬೆಳ್ಳಂದೂರು ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:07 IST
Last Updated 26 ಅಕ್ಟೋಬರ್ 2024, 16:07 IST
ನಾಗರತ್ನಾ 
ನಾಗರತ್ನಾ    

ಬೆಂಗಳೂರು: ಸುಪಾರಿ ನೀಡಿ ಪತಿಯ ಕೊಲೆ ಮಾಡಿಸಿದ್ದ ಪ್ರಕರಣದಲ್ಲಿ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬೆಳ್ಳಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಾಗರತ್ನಾ (27), ರಾಮ್(34), ಶಶಿಕುಮಾರ್(30), ಸುರೇಶ್(29) ಹಾಗೂ ಚಿನ್ನ(29) ಬಂಧಿತರು.

ಅಕ್ಟೋಬರ್ 14ರಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯ ಬೋಗನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ತಿಪ್ಪೇಶ್ (30) ಅವರ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಳ್ಳಾರಿ ಜಿಲ್ಲೆಯ ಕರೂರು ನಿವಾಸಿಗಳಾದ ತಿಪ್ಪೇಶ್‌ – ನಾಗರತ್ನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಬೆಳ್ಳಂದೂರಿನ ಬೋಗನಹಳ್ಳಿಯ ಲೇಬರ್ ಶೆಡ್‌ನಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಇಬ್ಬರೂ ಗಾರ್ಡನ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

‘ನಾಗರತ್ನಾ ಹಾಗೂ ರಾಮ್‌ ಮಧ್ಯೆ ಸಲುಗೆ ಬೆಳೆದಿತ್ತು. ಈ ವಿಷಯ ತಿಪ್ಪೇಶ್ ಅವರಿಗೆ ಗೊತ್ತಾಗಿತ್ತು. ಪತ್ನಿಯೊಂದಿಗೆ ಜಗಳವಾಡಿದ್ದರು. ಇದಾದ ಮೇಲೆ ಪತಿಯ ಕೊಲೆಗೆ ಪತ್ನಿ ಸುಪಾರಿ ನೀಡಿದ್ದರು. ರಾಮ್ ಹಾಗೂ ತಿಪ್ಪೇಶ್ ಇಬ್ಬರು ಕೊಲೆಗೆ ಸಂಚು ರೂಪಿಸಿದ್ದರು. ತನ್ನ ಸ್ನೇಹಿತರಾದ ಶಶಿಕುಮಾರ್, ಸುರೇಶ್ ಮತ್ತು ಚಿನ್ನ ಅವರನ್ನು ಕರೆಸಿಕೊಂಡು ಅ.14ರಂದು ಬೋಗನಹಳ್ಳಿ ಕೆರೆ ಬಳಿಯ ನೀಲಗಿರಿ ತೋಪಿನ ಬಳಿ ಕರೆದೊಯ್ದು ಕೆಳಗೆ ತಳ್ಳಿ ಕುತ್ತಿಗೆ ಹಿಸುಕಿ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

‘ನೀಲಗಿರಿ ತೋಪಿನಲ್ಲಿ ತಿಪ್ಪೇಶ್ ಅವರ ಕೊಲೆ ಆಗಿದೆ ಎಂದು ಸಂಬಂಧಿಕರು ಹಾಗೂ ಸ್ಥಳೀಯರು ನಾಗರತ್ನಾ ಅವರಿಗೆ ತಿಳಿಸಿದ್ದರು. ಸ್ಥಳಕ್ಕೆ ತೆರಳಿದ್ದ ನಾಗರತ್ನಾ ಮೃತದೇಹದ ಎದುರು ಪತಿಯನ್ನು ಯಾರೋ ಕೊಲೆ ಮಾಡಿದ್ದಾರೆ’ ಎಂದು ಕಣ್ಣೀರಿಟ್ಟು ನಾಟಕವಾಡಿದ್ದರು. ದುಷ್ಕರ್ಮಿಗಳು ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ನಾಗರತ್ನಾ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಆರಂಭದಲ್ಲಿ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಯಿತು. ಆರೋಪಿಗಳ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಾಗರತ್ನಾ ಅವರ ಮೊಬೈಲ್‌ ಫೋನ್‌ ಕರೆಗಳನ್ನು ಪರಿಶೀಲಿಸಿದಾಗ ಆರೋಪಿ ರಾಮ್ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.

ರಾಮ್‌ 
ಚಿನ್ನ 
ಶಶಿಕುಮಾರ್ 
ಸುರೇಶ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.