ADVERTISEMENT

ದಾಬಸ್‌ಪೇಟೆ: ತವರು ಮನೆಗೆ ಕೋಟಿ ಹಣ ಕೊಟ್ಟಿದ್ದಕ್ಕೆ ಪತ್ನಿ ಹತ್ಯೆ

ಮೃತದೇಹ ಹೂಳಲು ಗುಂಡಿ ತೋಡುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿ ಪತಿ

​ಪ್ರಜಾವಾಣಿ ವಾರ್ತೆ
Published 4 ಮೇ 2024, 15:16 IST
Last Updated 4 ಮೇ 2024, 15:16 IST
ಮೃತದೇಹ ಇರಿಸಿದ್ದ ನೀರಿನ ಸಂಪ
ಮೃತದೇಹ ಇರಿಸಿದ್ದ ನೀರಿನ ಸಂಪ   

ದಾಬಸ್‌ಪೇಟೆ: ಸೋಂಪುರ ಹೋಬಳಿ ಗೊಟ್ಟಿಕೆರೆ ಪಾಳ್ಯದಲ್ಲಿ ಜಯಲಕ್ಷ್ಮಿ (36) ಎಂಬುವವರನ್ನು ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ಶ್ರೀನಿವಾಸ್‌ (42) ಅವರನ್ನು ದಾಬಸ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಗೊಟ್ಟಿಕೆರೆ ಪಾಳ್ಯದ ಶ್ರೀನಿವಾಸ್ ಅವರ ಜಮೀನು ಸ್ವಾಧೀನ ಪಡೆದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸುಮಾರು ₹ 1 ಕೋಟಿ ಪರಿಹಾರ ಮಂಜೂರು ಮಾಡಿತ್ತು. ಇದೇ ಹಣವನ್ನು ಜಯಲಕ್ಷ್ಮಿ ತವರು ಮನೆಗೆ ನೀಡಿದ್ದರೆಂದು ಗೊತ್ತಾಗಿದೆ. ಇದೇ ಕಾರಣಕ್ಕೆ ಆರೋಪಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಶ್ರೀನಿವಾಸ್ ಹಾಗೂ ಜಯಲಕ್ಷ್ಮಿ ದಂಪತಿಗೆ ಮಕ್ಕಳಿದ್ದಾರೆ. ಜಮೀನಿನಲ್ಲಿಯೇ ಮನೆ ಮಾಡಿಕೊಂಡು ಕುಟುಂಬ ವಾಸವಿತ್ತು. ಮದ್ಯವ್ಯಸನಿ ಆಗಿದ್ದ ಶ್ರೀನಿವಾಸ್, ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪತ್ನಿ ಮೇಲೂ ಹಲ್ಲೆ ಮಾಡುತ್ತಿದ್ದ. ಗ್ರಾಮದ ಹಿರಿಯರು, ದಂಪತಿ ನಡುವೆ ಹಲವು ಬಾರಿ ಸಂಧಾನ ಮಾಡಿದ್ದರು’ ಎಂದು ತಿಳಿಸಿದರು.

ADVERTISEMENT

ಮಚ್ಚಿನಿಂದ ಹೊಡೆದು ಕೊಲೆ: ‘ಪರಿಹಾರದ ಮೊತ್ತವನ್ನು ಜಯಲಕ್ಷ್ಮಿ ತನ್ನ ತವರು ಮನೆಗೆ ನೀಡಿದ್ದು ತಿಳಿಯುತ್ತಿದ್ದಂತೆ ಶ್ರೀನಿವಾಸ್ ಜಗಳ ಮಾಡೊ. ಹಣ ವಾಪಸು ತರಿಸಲು ತಾಕೀತು ಮಾಡಿದ್ದ. ಆದರೆ, ಜಯಲಕ್ಷ್ಮಿ ಹಿಂದೇಟು ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಏಪ್ರಿಲ್ 30ರಂದು ದಂಪತಿ ನಡುವೆ ಜಗಳ ಶುರುವಾಗಿತ್ತು. ಜಗಳ ವಿಕೋಪಕ್ಕೆ ಹೋಗಿ ಶ್ರೀನಿವಾಸ್, ಪತ್ನಿಗೆ ಮಚ್ಚಿನಿಂದ ಹೊಡೆದಿದ್ದ. ರಕ್ತಸ್ರಾವದಿಂದಾಗಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಜಮೀನಿನಲ್ಲಿಯೇ ಶವ ಬಿಟ್ಟು ಮನೆಗೆ ಹೋಗಿದ್ದ’ ಎಂದು ತಿಳಿಸಿವೆ.

ನಾಯಿಯ ಮೃತದೇಹವೆಂದಿದ್ದ: ‘ಜಮೀನು ಬಳಿ ಹೋಗಿದ್ದ ಮಕ್ಕಳು, ಯಾರೋ ಬಿದ್ದಿದ್ದನ್ನು ದೂರದಿಂದ ನೋಡಿದ್ದರು. ಜೊತೆಗಿದ್ದ ತಂದೆಗೂ ವಿಷಯ ತಿಳಿಸಿದ್ದರು. ಆರೋಪಿ, ನಾಯಿ ಬಿದ್ದಿರುವುದಾಗಿ ಹೇಳಿ ಮಕ್ಕಳನ್ನು ಮನೆಗೆ ಕಳುಹಿಸಿದ್ದ. ನಂತರ, ಮೃತದೇಹವನ್ನು ಮನೆಯ ನೀರಿನ ಸಂಪಿನಲ್ಲಿ ಎಸೆದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗುಂಡಿ ತೋಡುತ್ತಿದ್ದಾಗ ಸಿಕ್ಕಿಬಿದ್ದ: ‘ರಾತ್ರಿಯವರೆಗೂ ನೀರಿನ ಸಂಪಿನಲ್ಲಿಯೇ ಮೃತದೇಹವಿತ್ತು. ರಾತ್ರಿ 12 ಗಂಟೆಗೆ ಜಮೀನಿಗೆ ಬಂದಿದ್ದ ಆರೋಪಿ, ಮೃತದೇಹ ಹೂಳಲು ಗುಂಡಿ ತೋಡುತ್ತಿದ್ದ. ದೂರದಲ್ಲಿರುವ ಮನೆಯ ಚಾವಣಿಯಲ್ಲಿದ್ದ ಮಕ್ಕಳು, ಯಾರೋ ಗುಂಡಿ ತೋಡುತ್ತಿದ್ದಾರೆಂದು ಸ್ಥಳಕ್ಕೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತಂದೆಯನ್ನು ನೋಡಿದ್ದ ಮಕ್ಕಳು, ‘ಏಕೆ ಗುಂಡಿ ತೆಗೆಯುತ್ತಿದ್ದಿಯಾ’ ಎಂದು ಪ್ರಶ್ನಿಸಿದ್ದರು. ತೆಂಗಿನ ಸಸಿ ನೆಡಲು ಗುಂಡಿ ತೋಡುತ್ತಿರುವುದಾಗಿ ಹೇಳಿ ವಾಪಸು ಕಳುಹಿಸಿದ್ದ. ಬಳಿಕ, ನೀರಿನ ಸಂಪಿನಲ್ಲಿದ್ದ ಮೃತದೇಹವನ್ನು ತರಲು ಆರೋಪಿ ಹೋಗಿದ್ದ. ಆಗ ಮಕ್ಕಳು ತಾಯಿಯ ಮೃತದೇಹ ನೋಡಿದ್ದರು. ಹೆದರಿದ್ದ ಮಕ್ಕಳು, ಅಳಲಾರಂಭಿಸಿದ್ದರು. ವಿಷಯವನ್ನು ಯಾರಿಗೂ ಹೇಳದಂತೆ ಶ್ರೀನಿವಾಸ್, ಮಕ್ಕಳಿಗೂ ಜೀವ ಬೆದರಿಕೆಯೊಡ್ಡಿದ್ದ’ ಎಂದು ಮೂಲಗಳು ಹೇಳಿವೆ.

‘ತಾಯಿ ಮೃತಪಟ್ಟ ವಿಷಯವನ್ನು ಮಕ್ಕಳು ಸಂಬಂಧಿಕರಿಗೆ ತಿಳಿಸಿದ್ದರು. ನಂತರವೇ ಠಾಣೆಗೆ ವಿಷಯ ಗೊತ್ತಾಗಿತ್ತು. ನೆಲಮಂಗಲ ಡಿವೈಎಸ್ಪಿ ಜಗದೀಶ್, ದಾಬಸ್ ಪೇಟೆ ಠಾಣೆ ಇನ್‌ಸ್ಪೆಕ್ಟರ್ ಬಿ.ರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ₹ 1 ಕೋಟಿ ಹಣದ ವಿಚಾರಕ್ಕೆ ಪತ್ನಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ’ ಎಂದು ಮೂಲಗಳು ತಿಳಿಸಿವೆ.

ಶ್ರೀನಿವಾಸ್
ಜಯಲಕ್ಷ್ಮಿ
ಪತ್ನಿಯ ಮೃತದೇಹ ಹೂಳಲು ಪತಿ ತೋಡಿದ್ದ ಗುಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.