ಬೆಂಗಳೂರು: ‘ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಅನೇಕ ತಪ್ಪು, ಸುಳ್ಳು ಹಾಗೂ ತಿರುಚಿದ ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಹಾಗಾಗಿ, ವಿಕಿಪೀಡಿಯಾದಬಳಕೆ ಕಡಿಮೆ ಮಾಡುವುದು ಸೂಕ್ತ’ ಎಂದು ಮುಖ್ಯಮಂತ್ರಿಗಳ ಇ–ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಅಭಿಪ್ರಾಯಪಟ್ಟರು.
ಅನಂತಕುಮಾರ್ ಪ್ರತಿಷ್ಠಾನವು ಆನ್‌ಲೈನ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಅನಂತಪಥ’ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ‘ಕನ್ನಡದಲ್ಲಿ ಮುಕ್ತ ಜ್ಞಾನ–ತಂತ್ರಜ್ಞಾನ’ ಕುರಿತು ಅವರು ಮಾತನಾಡಿದರು.
‘ಪಾಶ್ಚಾತ್ಯ ವಿಕಿಪೀಡಿಯಾ ಕಾರ್ಯಕರ್ತರು ತಮಗೆ ಸರಿಕಂಡ ವಿಷಯಗಳನ್ನು ಮಾತ್ರ ವಿಕಿಪೀಡಿಯಾದಲ್ಲಿ ಹಾಕಿ, ಅದನ್ನು ಯಾರೂ ಬದಲಾಯಿಸದ ಹಾಗೆ ತಾಂತ್ರಿಕವಾಗಿ ಬಂಧಿಸಿದ್ದಾರೆ. ಇದರಿಂದ ಅಲ್ಲಿ ತಪ್ಪು ಮಾಹಿತಿಗಳೇ ಅಧಿಕವಾಗಿವೆ. ಅದರಲ್ಲಿರುವುದು ಪ್ರಾಥಮಿಕ ಮಾಹಿತಿಗಳು ಅಷ್ಟೇ’ ಎಂದರು.
‘ಕನ್ನಡ ಹಾಗೂಇಂಗ್ಲಿಷ್ ವಿಕಿಪೀಡಿಯಗಳಲ್ಲಿಪಾರಂಪರಿಕ ವೈದ್ಯಕೀಯ ಪದ್ಧತಿಗಳ ಬಗ್ಗೆ ವಿಭಿನ್ನವಾದ ಮಾಹಿತಿಗಳು ಸಿಗುತ್ತವೆ. ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಮಾಹಿತಿ ಬದಲಾಯಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ’ ಎಂದೂ ಹೇಳಿದರು.
‘ಮುಕ್ತ ಜ್ಞಾನದ ಕಲ್ಪನೆ ನಮ್ಮ ಪರಂಪರೆಗೆ ಹೊಸತಲ್ಲ. ಋಷಿಮುನಿಗಳು ಶತಮಾನಗಳಿಂದ ಜ್ಞಾನವನ್ನು ಮುಕ್ತವಾಗಿ ನೀಡುತ್ತಾ ಬಂದಿದ್ದಾರೆ. ನಮ್ಮಲ್ಲಿ ಇಂದಿಗೂ ಜ್ಞಾನ ಮುಕ್ತವಾಗಿ ಸಿಗುತ್ತಿದೆ.ಪ್ರಕಾಶನ ಜಗತ್ತಿನಲ್ಲಿ ಹಕ್ಕುಸ್ವಾಮ್ಯ ಇಂದು ಬಹುದೊಡ್ಡ ವಿಷಯ. ಹಿಂದೆ ಜ್ಞಾನದ ನಕಲು ಎಂಬ ಪ್ರಶ್ನೆಯೇ ಇರಲಿಲ್ಲ.ಇದೊಂದು ಪಾಶ್ಚಾತ್ಯ ಪರಿಕಲ್ಪನೆ’ ಎಂದರು.
‘ಅಂದು ಕಲ್ಲಿನಲ್ಲಿ ಕೆತ್ತಿದ್ದ ಅಕ್ಷರಗಳು ಇಂದು ಕಂಪ್ಯೂಟರ್‌ನಲ್ಲಿ ಅಕ್ಷರಗಳಾಗಿ ಮೂಡುತ್ತಿವೆ. ಇದು, ಇಂದಿನ ಜಾಗತಿಕ ಮಾನದಂಡವೂ ಹೌದು. ತಂತ್ರಜ್ಞಾನ ಭಾರತೀಯ ಕಲ್ಪನೆಯಲ್ಲಿ ಹಾಸುಹೊಕ್ಕಾಗಿದೆ. ಈಗ ಅದನ್ನು ಮತ್ತೆ ಆನ್‌ಲೈನ್‌ನಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇವೆ.ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನಾವು ಬಳಸುವ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಬಳಸಬೇಕು. ಆಗ ಮಾತ್ರ ನಮ್ಮಪರಂಪರೆ, ಜ್ಞಾನ ಹಾಗೂ ಭಾಷೆಯನ್ನು ಮನವರಿಕೆ ಮಾಡಬಹುದು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.