ADVERTISEMENT

ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್‌ ಕೆಂಡಾಮಂಡಲ

ಮೇಯರ್–ಉಪಮೇಯರ್, ಆಡಳಿತ ಪಕ್ಷದ ನಾಯಕರ ವಿರುದ್ಧ ಚಾಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 6:08 IST
Last Updated 28 ನವೆಂಬರ್ 2019, 6:08 IST
   

ಬೆಂಗಳೂರು: ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯಗೊಂಡವರಿಗೆ ಪರಿಹಾರ ನೀಡುವ ಬಗ್ಗೆ ಕೋರ್ಟ್ ನೀಡಿದ ಆದೇಶ ಪಾಲನೆ ಮಾಡದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್, ಉಪ ಮೇಯರ್‌ ಮತ್ತು ಆಡಳಿತ ಪಕ್ಷದ ನಾಯಕರು ಉದ್ಧಟತನ ಮೆರೆದಿದ್ದಾರೆ’ ಎಂದು ಹೈಕೋರ್ಟ್ ಕೆಂಡಾಮಂಡಲವಾಗಿದೆ.

‘ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು–ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿದರು. ‘ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯಗೊಂಡವರಿಗೆಬಿಬಿಎಂಪಿ ಪರಿಹಾರ ನೀಡಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು ಎಂದು ಹೈಕೋರ್ಟ್ ನೀಡಿದ್ದ ಆದೇಶದ ಬಗ್ಗೆ ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆ ನಡೆಸಿದ್ದಾರೆ. ಈ ವಿಚಾರವಾಗಿ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಚರ್ಚೆಆಗಬೇಕು ಎಂಬ ನಿರ್ಣಯ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪ್ರಮಾಣ ಪತ್ರದಲ್ಲಿನ ಈ ಅಂಶಗಮನಿಸಿದ ನ್ಯಾಯಪೀಠ ಕ್ರೋಧಗೊಂಡು, ‘ಕೋರ್ಟ್ ಆದೇಶ ಪಾಲನೆ ಮಾಡುವುದನ್ನು ಬಿಟ್ಟು ಸಭೆ ಸೇರಿ ಕೋರ್ಟ್ ಆದೇಶದ ಬಗ್ಗೆ ಚರ್ಚಿಸುತ್ತಾರೆ ಎಂದರೆ ಏನರ್ಥ, ಕೋರ್ಟ್‍ನ ಘನತೆ ಹಾಗೂ ಪ್ರತಿಷ್ಠೆಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ’ ಎಂದು ಗುಡುಗಿತು.

‘ಇದು ನ್ಯಾಯಾಂಗದಲ್ಲಿ ನಡೆಸಿರುವ ಹಸ್ತಕ್ಷೇಪ. ಬಿಬಿಎಂಪಿಗೆ ತಕ್ಕಪಾಠ ಕಲಿಸಲೇಬೇಕು. ಸಭೆನಡೆಸಿದ ಆ ಮೂವರ ಹೆಸರು ಕೊಡಿ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ಜಾರಿಗೊಳಿಸುತ್ತೇವೆ’ಎಂದು ಎಚ್ಚರಿಸಿತು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ‘ಕೋರ್ಟ್ ಹಾಗೂ ಅದರ ಆದೇಶಗಳ ಬಗ್ಗೆ ಬಿಬಿಎಂಪಿ ತುಂಬು ಗೌರವ ಹೊಂದಿದೆ. ರಸ್ತೆ ಗುಂಡಿಗಳಿಂದ ಅಪಘಾತವಾಗಿ ಗಾಯಗೊಂಡವರಿಗೆ ಪರಿಹಾರ ನೀಡಲು ಕರ್ನಾಟಕ ಪೌರಾಡಳಿತ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿಲ್ಲ. ಈ ವಿಷಯದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಒಂದು ವಾರ ಕಾಲಾವಕಾಶ ಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ‘ಒಂದುದಿನವೂ ಸಮಯ ನೀಡಲು ಆಗದು.ಈಗ ಏನಿದ್ದರೂ ಹೈಕೋರ್ಟ್ ತನ್ನ ಅಧಿಕಾರ ಚಲಾಯಿಸಬೇಕಷ್ಟೇ’ ಎಂದು ಕಿಡಿ ಕಾರಿತು.

‘ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಕೋರ್ಟ್ ಆದೇಶಗಳ ವಿಚಾರದಲ್ಲಿ ಬಿಬಿಎಂಪಿ ನಡೆದುಕೊಳ್ಳುತ್ತಿರುವ ರೀತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುರುವಾರ (ನ.28) ಬೆಳಗ್ಗೆ 10.30ಕ್ಕೆ ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕರ ಹೆಸರು ಕೊಡಿ, ಮುಂದೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ’ ಎಂದು ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.