ADVERTISEMENT

‌ಪೊಲೀಸ್ ಠಾಣೆಯಲ್ಲಿ ಬೆಂಕಿ ಅವಘಡ | ಸುಟ್ಟು ಕರಕಲಾದ ಹಳೇ ವಸ್ತುಗಳು, ಕಡತಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 23:00 IST
Last Updated 18 ಅಕ್ಟೋಬರ್ 2022, 23:00 IST
ವಿಲ್ಸನ್ ಗಾರ್ಡನ್ ಠಾಣೆ ಕಟ್ಟಡದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿ
ವಿಲ್ಸನ್ ಗಾರ್ಡನ್ ಠಾಣೆ ಕಟ್ಟಡದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿ   

ಬೆಂಗಳೂರು: ವಿಲ್ಸನ್ ಗಾರ್ಡನ್ ಠಾಣೆ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದಾಸ್ತಾನು ಕೊಠಡಿಯಲ್ಲಿ ಇರಿಸಿದ್ದ ವಸ್ತುಗಳು ಹಾಗೂ ಕೆಲ ದಾಖಲೆಗಳು ಸುಟ್ಟು ಕರಕಲಾಗಿವೆ.

‘ದಾಸ್ತಾನು ಕೊಠಡಿಯಲ್ಲಿ ಮಂಗಳವಾರ ಬೆಳಿಗ್ಗೆ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು, ಕೆಲ ಕ್ಷಣಗಳಲ್ಲಿ ಇಡೀ ಕೊಠಡಿ ಆವರಿಸಿತ್ತು. ಬೆಂಕಿ ನಂದಿಸಲು ಠಾಣೆ ಸಿಬ್ಬಂದಿ ಯತ್ನಿಸಿ ವಿಫಲರಾಗಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು’ ಎಂದು ಪೊಲೀಸರು ಹೇಳಿದರು.

’ಸಿಬ್ಬಂದಿ ಬಳಸಿದ್ದ ಬೂಟು, ಕ್ಯಾಪ್, ಬಟ್ಟೆ, ಟ್ರಂಕ್‌ಗಳು, ಹಳೇ ಕಂಪ್ಯೂಟರ್ ಸೇರಿ ಹಲವು ವಸ್ತುಗಳು ಕೊಠಡಿಯಲ್ಲಿದ್ದವು. ಕೆಲ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಸ್ತುಗಳು ಹಾಗೂ ಪ್ರಕರಣಗಳ ಕಡತಗಳೂ ಕೊಠಡಿಯಲ್ಲಿದ್ದವು. ಬೆಂಕಿ ಹೊತ್ತಿಕೊಂಡಿದ್ದರಿಂದ ಎಲ್ಲ ವಸ್ತುಗಳು ಹಾಗೂ ಕಡತ ಸಂಪೂರ್ಣ ಸುಟ್ಟಿವೆ’ ಎಂದು ತಿಳಿಸಿದರು.

ADVERTISEMENT

‘ದಾಸ್ತಾನು ಕೊಠಡಿಗೆ ಹೊಂದಿಕೊಂಡೇ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅವರೆಲ್ಲ ಹೊರಗೆ ಬಂದಿದ್ದರು’ ಎಂದು ಹೇಳಿದರು.

ತಂತಿ ತುಂಡರಿಸಿದ್ದರಿಂದ ಶಾರ್ಟ್‌ ಸರ್ಕೀಟ್: ‘ದಾಸ್ತಾನು ಕೊಠಡಿಯಲ್ಲಿ ಇಲಿಗಳು ಹೆಚ್ಚಿವೆ. ವಿದ್ಯುತ್ ತಂತಿಯನ್ನು ಇಲಿ ಕಡಿದಿರುವ ಅನುಮಾನವಿದೆ. ತುಂಡರಿಸಿದ್ದ ತಂತಿಯಿಂದಾಗಿ ವಿದ್ಯುತ್ ಶಾರ್ಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಬೆಂಕಿ ಅವಘಡದಲ್ಲಿ ಯಾವೆಲ್ಲ ವಸ್ತುಗಳು ಸುಟ್ಟಿವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸುಟ್ಟಿರುವ ಕಡತಗಳ ಪ್ರತಿಗಳೂ ಬೇರೆ ಕಡೆ ಇವೆ. ಅವಘಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ‘ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.